ADVERTISEMENT

ಉದ್ಯಮಿಗಳ ಸಾಲ ಮನ್ನಾ ಮಾಡಿದ ಮೋದಿ

ನಾಯಕನಹಟ್ಟಿಯ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2018, 8:52 IST
Last Updated 4 ಮೇ 2018, 8:52 IST

ಚಿತ್ರದುರ್ಗ: ‘ಬೆಂಗಳೂರು ಹೊರತುಪಡಿಸಿ ರಾಜ್ಯದ ದಕ್ಷಿಣದಲ್ಲಿ ಬಿಜೆಪಿಗೆ ಅಸ್ತಿತ್ವವಿಲ್ಲ. ಉತ್ತರದಲ್ಲಿ ಜೆಡಿಎಸ್‌ಗೆ ಅಸ್ತಿತ್ವವಿಲ್ಲ. ಆದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ದಿನಾಂಕ ನಿಗದಿಪಡಿಸಿದ್ದಾರೆ. ಕುಮಾರಸ್ವಾಮಿಯೂ ಮುಖ್ಯಮಂತ್ರಿಯಾಗುತ್ತೇನೆ ಎನ್ನುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್‌ ಬಾಬು ಪರ ಮತಯಾಚಿಸಿ ಅವರು ಮಾತನಾಡಿದರು.

ಜೆಡಿಎಸ್, ಬಿಜೆಪಿಗಳಲ್ಲಿ ಸಮರ್ಥ ಅಭ್ಯರ್ಥಿಗಳೂ ಇಲ್ಲ. ಆದರೂ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿದ್ದು, ಎರಡೂ ಪಕ್ಷಗಳಿಗೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಸಾಮರ್ಥ್ಯ ಇಲ್ಲ ಎಂದು ಹೇಳಿದರು.

ADVERTISEMENT

‘ರಾಜ್ಯದ 30 ಜಿಲ್ಲೆಗಳಲ್ಲಿಯೂ ಕಾಂಗ್ರೆಸ್‌ ಶಾಸಕರಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ನೀಡಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದೀರಿ. ದೇವರಾಜ ಅರಸು ಬಳಿಕ ಐದು ವರ್ಷ ಪೂರೈಸಿದ ಎರಡನೇ ಮುಖ್ಯಮಂತ್ರಿ ನಾನು. ಬಿಜೆಪಿ ಅಧಿಕಾರವಧಿಯಲ್ಲಿ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಂಡಿತ್ತು’ ಎಂದು ಟೀಕಿಸಿದರು.

‘ರೈತರ ಸಾಲ ಮನ್ನಾ ವಿಚಾರದಲ್ಲಿ  ಸಕಾರಾತ್ಮಕವಾಗಿ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿ, ಉದ್ಯಮಿಗಳ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ₹ 72 ಸಾವಿರ ಕೋಟಿ ಕೃಷಿ ಸಾಲಮನ್ನಾ ಮಾಡಿದ್ದರು. ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ₹ 50 ಸಾವಿರ ರೂಪಾಯಿ ಒಳಗಿನ ಸಾಲವನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಮನ್ನಾ ಮಾಡಿದ್ದು, ₹ 8,452 ಕೋಟಿ ವೆಚ್ಚ ಮಾಡಿದ್ದೇವೆ’ ಎಂದು ಲೆಕ್ಕನೀಡಿದರು.

‘ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ದಾಗ ಸಾಲಮನ್ನಾ ಕುರಿತು ಬಿಜೆಪಿ ಸಂಸದರು ತುಟಿ ಬಿಚ್ಚಲಿಲ್ಲ. 2009ರ ಡಿ. 30ರಂದು ಅಧಿವೇಶನದಲ್ಲಿ ಉಗ್ರಪ್ಪ ಸಾಲಮನ್ನಾ ಮಾಡಿ ಎಂದು ಕೇಳಿದ್ದರು. ಅದಕ್ಕೆ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸಾಲಮನ್ನಾ ಮಾಡಲು ಹಣವಿಲ್ಲ. ನಾವು ನೋಟು ಪ್ರಿಂಟ್‌ ಮಾಡುವ ಯಂತ್ರ ಇಟ್ಟುಕೊಂಡಿಲ್ಲವೆಂದು ಪ್ರತಿಕ್ರಿಯಿಸಿದ್ದರು. ಇಂಥವರು ಈಗ ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿಯಲ್ಲಿ ಜೈಲಿಗೆ ಹೋಗಿದ್ದವರು, ರಾಜ್ಯ ಲೂಟಿ ಮಾಡಿದವರೆಲ್ಲ ಒಂದಾಗಿದ್ದಾರೆ. ಲೂಟಿಕೋರರನ್ನು ಕರ್ನಾಟಕದ ಜನ ಬೆಂಬಲಿಸುವುದಿಲ್ಲ.  ನಮ್ಮದು ನುಡಿದಂತೆ ನಡೆದ ಸರ್ಕಾರ. 2013ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಆರು ಭರವಸೆಗಳನ್ನು ಈಡೇರಿಸಿದ್ದೇವೆ. ಅದರಲ್ಲಿ ಬಹುಮುಖ್ಯವಾದದ್ದು ಅನ್ನಭಾಗ್ಯ ಯೋಜನೆ. ಅನ್ನಕ್ಕಾಗಿ ಯಾರೂ ಮತ್ತೊಬ್ಬರ ಮನೆಯ ಬಾಗಿಲು ಕಾಯಬಾರದು ಎಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆ ತಂದಿದ್ದೇನೆ. ಪ್ರತಿ ತಿಂಗಳು 4 ಕೋಟಿ ಜನರಿಗೆ ತಲಾ 7 ಕೆ.ಜಿ ಅಕ್ಕಿ ಕೊಡುತ್ತಿದ್ದೇವೆ. ಇದು ಬೇರೆ ಯಾವ ರಾಜ್ಯದಲ್ಲೂ ಜಾರಿಯಲ್ಲಿಲ್ಲ. ಆದರೆ ಕೆಲವರು ಅನ್ನಭಾಗ್ಯ ಯೋಜನೆಯನ್ನು ಟೀಕಿಸಿದರು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಎಚ್. ಆಂಜನೇಯ, ಅಭ್ಯರ್ಥಿಗಳಾದ ಚಳ್ಳಕೆರೆ ಟಿ. ರಘುಮೂರ್ತಿ, ಚಿತ್ರದುರ್ಗದ ಎಚ್.ಎ. ಷಣ್ಮಖಪ್ಪ, ಹಿರಿಯೂರು ಡಿ.ಸುಧಾಕರ್, ಡಿಸಿಸಿ ಅಧ್ಯಕ್ಷ ಫಾತ್ಯರಾಜನ್, ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ, ಸಂಸದ ಬಿ.ಎನ್. ಚಂದ್ರಪ್ಪ, ಸತೀಶ್ ಜಾರಕಿಹೊಳಿ, ಗೋ.ತಿಪ್ಪೇಶ್, ಜಿ.ಎಸ್. ಮಂಜುನಾಥ್, ಆರ್. ಸರ್ದಾರ್ ಇದ್ದರು.

‘ನನಗಿಂತ ಜಾಸ್ತಿ ಓದಿದ್ದಾನೆ’

ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್‌ ಬಾಬು ಅವರ ಶೈಕ್ಷಣಿಕ ಅರ್ಹತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದರು. ‘ಯೋಗೇಶ್‌ ವಿದ್ಯಾವಂತ ಯುವಕ. ನನಗಿಂತಲೂ ಜಾಸ್ತಿ ಓದಿದ್ದಾನೆ. ಸಮಾಜ ಸೇವೆ ಮಾಡಬೇಕು ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದಾನೆ. ಅರ್ಜಿ ಹಾಕಿಕೊಂಡು ರಾಜಕಾರಣಕ್ಕೆ ಯಾರೂ ಬರುವುದಿಲ್ಲ. ಯೋಗ್ಯರು, ಬದ್ಧತೆ ಇರುವವರು ಇಲ್ಲಿಗೆ ಬರಬೇಕು. ಇದೊಂದು ಸೇವಾ ಕ್ಷೇತ್ರವಾಗಿದ್ದು, ಸ್ವಾರ್ಥಬಿಟ್ಟು ಸೇವೆ ಮಾಡುವವರ ಅಗತ್ಯವಿದೆ’ ಎಂದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್. ಎ. ಷಣ್ಮುಖಪ್ಪ ಅವರ ‘ಡಾಕ್ಟರೇಟ್’ ಬಗ್ಗೆ ಕೇಳಿ ‘ನೀವೆಲ್ಲ ಎಷ್ಟು ಓದಿದ್ದೀರಿ. ನಾನು ಬಿಎಸ್ಸಿ ಎಲ್‌ಎಲ್‌ಬಿ ಮಾತ್ರ’ ಎಂದು ತಮ್ಮ ವಿದ್ಯಾರ್ಹತೆಯನ್ನು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.