ಚಿತ್ರದುರ್ಗ: ಮಾಜಿ ಶಾಸಕ ಎ.ವಿ. ಉಮಾಪತಿ ಅವರು ಕಾಂಗ್ರೆಸ್ ತ್ಯಜಿಸಿರುವುದರಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಾಗಿಲ್ಲ ಎಂದು ಮಾಜಿ ಸಚಿವ ಎ. ಕೃಷ್ಣಪ್ಪ ತಿಳಿಸಿದ್ದಾರೆ.
ಉಮಾಪತಿ ಅವರು ಪಕ್ಷ ತ್ಯಜಿಸಿದ ಮಾತ್ರಕ್ಕೆ ಅಲ್ಲೋಲಕಲ್ಲೋಲವಾಗಿಲ್ಲ. ಅವರ ಸಾಮರ್ಥ್ಯ ಏನು ಎನ್ನುವುದು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸಾಬೀತಾಗಿದೆ. ಸ್ವಂತ ಮಗನನ್ನೇ ಈ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರಿನಿಂದ ಸ್ಪರ್ಧಿಸಿದ್ದ ಉಮಾಪತಿ ಕೇವಲ 1,400 ಮತಗಳನ್ನು ಪಡೆದು ಠೇವಣಿಯೂ ಸಿಗದೆ ಹೀನಾಯವಾಗಿ ಸೋತಿದ್ದಾರೆ. ಇದರಿಂದ ಗೊತ್ತಾಗುತ್ತದೆ ಅವರ ಶಕ್ತಿ ಏನು ಎಂಬುದು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಯಶಸ್ಸಿಯಾಗಿ ನಡೆಯುತ್ತಿದ್ದು, ಕಾರ್ಯಕರ್ತರು ಉತ್ಸಾಹದಿಂದ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಸ್ಥಳಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನುಡಿದರು.
ನೋಂದಣಿ ಕಾರ್ಯ ಭರದಿಂದ ಸಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ಆಯಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯತ್ವ ನೋಂದಣಿ ಕೆಲಸ ನಡೆಯುತ್ತಿದೆ. ಮಾಜಿ ಮತ್ತು ಹಾಲಿ ಶಾಸಕರು ಹಾಗೂ ಪಕ್ಷದ ಮುಖಂಡರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಅನ್ನು ಶಕ್ತಿಯುತವಾಗಿ ಬೆಳೆಸಲು ಇದು ಸಹಕಾರಿಯಾಗಲಿದೆ. ಪಕ್ಷದ ಬೆಳವಣಿಗೆಗೂ ಇದು ಪೂರಕವಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಗುಂಪುಗಾರಿಕೆ ಇರುವುದು ಸತ್ಯ. ಇದರಿಂದ ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದು ಎಂದು ಕೃಷ್ಣಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ. ಮಹಾಲಿಂಗಪ್ಪ, ಮುಖಂಡರಾದ ಬಿ.ಟಿ.ಜಗದೀಶ್, ಸಂಪತ್ ಕುಮಾರ್, ಲಕ್ಷ್ಮೀಕಾಂತ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.