ADVERTISEMENT

ಎಲ್ಲೆಲ್ಲೂ ಜಲ ದರ್ಶನ: ಉರುಳಿ ಬಿದ್ದ ವಿದ್ಯುತ್‌ ಕಂಬಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 6:17 IST
Last Updated 16 ಅಕ್ಟೋಬರ್ 2017, 6:17 IST

ಚಿಕ್ಕಜಾಜೂರು: ಶನಿವಾರ ರಾತ್ರಿ ಬಿ.ದುರ್ಗ ಹೋಬಳಿಯಾದ್ಯಾಂತ ಧಾರಾಕಾರ ಮಳೆಯಾಗಿದೆ. ಚಿಕ್ಕಜಾಜೂರಿನಲ್ಲಿ 58.2 ಮಿ.ಮೀ ಮಳೆಯಾಗಿದ್ದು, ಹೋಬಳಿ ಕೇಂದ್ರವಾದ ಬಿ.ದುರ್ಗದಲ್ಲಿ 65 ಮಿ.ಮೀ, ಶನಿವಾರ 35 ಮಿ.ಮೀ ಮಳೆಯಾದ ವರದಿಯಾಗಿದೆ.

ನೆಲಕ್ಕುರುಳಿದ ವಿದ್ಯುತ್‌ ಕಂಬಗಳು: ಶುಕ್ರವಾರ ರಾತ್ರಿ ಬಿದ್ದ ಮಳೆಯಿಂದಾಗಿ ಕಡೂರು ರಸ್ತೆಯಲ್ಲಿರುವ ಲಕ್ಷ್ಮೀಪತಿ ಅವರ ಜಮೀನಿಗೆ ಹೋಗುವ ಮಾರ್ಗದಲ್ಲಿ ಎರಡು ವಿದ್ಯುತ್‌ ಕಂಬಗಳು ನೆಲಕ್ಕುರುಳಿ ಬಿದ್ದಿವೆ.

ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ದುರಸ್ತಿ ಆಗುತ್ತಿಲ್ಲ. ನೀರು ಖಾಲಿಯಾದ ನಂತರ ವಿದ್ಯುತ್‌ ಮಾರ್ಗ ದುರಸ್ತಿ ಮಾಡಿಸಲಾಗುವುದು ಎಂದು ಶಾಖಾಧಿಕಾರಿ ಬಸವರಾಜ್‌ ತಿಳಿಸಿದರು.

ADVERTISEMENT

ಎರಡು ಅಡಿ ಬಾಕಿ: ಒಂದು ವಾರದಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ಬಸವನಪಾದ ಗೋಕಟ್ಟೆಗೆ ಸಾಕಷ್ಟು ನೀರು ಹರಿದು ಬಂದಿದ್ದು, ಎರಡು ಅಡಿಯಷ್ಟು ನೀರು ಬಂದರೆ ಕೋಡಿ ಬೀಳಲಿದೆ. ಕೋಡಿ ಬಿದ್ದ ನಂತರ ನೀರು ವ್ಯರ್ಥವಾಗಿ ಹರಿದು ಹೋಗುವುದು. ಆದ್ದರಿಂದ ಬಸವನಪಾದ ಹಾಗೂ ಮಾರುತಿ ನಗರದಿಂದ ವ್ಯರ್ಥವಾಗಿ ಹರಿಯುವ ನೀರನ್ನು ಗ್ರಾಮದ ದೊಡ್ಡ ಕೆರೆಗೆ ಹಾಯಿಸಲು ವ್ಯವಸ್ಥೆ ಮಾಡಿಬೇಕು. ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುವಂತೆ ವ್ಯವಸ್ಥೆ ರೂ‍ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಡೂರು, ಹಿರೇಎಮ್ಮಿಗನೂರು, ಐಯ್ಯನಹಳ್ಳಿ, ಚಿಕ್ಕಎಮ್ಮಿಗನೂರು, ಕೊಡಗವಳ್ಳಿ, ಕೆ.ಜಿ.ಹಟ್ಟಿ, ಬಾಣಗೆರೆ, ಪಾಡಿಗಟ್ಟೆ, ಆಡನೂರು, ಅಪ್ಪರಸನಹಳ್ಳಿ, ಹೊನ್ನಕಾಲುವೆ, ಹನುಮನಹಳ್ಳಿ, ಅಂದನೂರು, ಸಾಸಲು, ಮುತ್ತುಗದೂರು, ಬಿ.ಬಿ.ಹಳ್ಳಿ, ಕಾಳಘಟ್ಟ, ಹನುಮನಕಟ್ಟೆ, ಕೇಶವಾಪುರ, ಬಿಜ್ಜನಾಳು, ಅಮೃತಾಪುರ, ಅರನಘಟ್ಟ, ಚಿಕ್ಕಂದವಾಡಿ, ಕಲ್ಲವ್ವನಾಗತಿಹಳ್ಳಿ, ಹಿರೇಕಂದವಾಡಿ ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಬಹುತೇಕ ಚೆಕ್‌ ಡ್ಯಾಂಗಳು ತುಂಬಿವೆ.
ಹೋಬಳಿಯ ಮುತ್ತುಗದೂರು ಕೆರೆಯೊಂದನ್ನು ಹೊರತು ಪಡಿಸಿ, ಬೇರೆ ಯಾವುದೇ ಕೆರೆಗಳಿಗೂ ಸಾಕಷ್ಟು ನೀರು ಹರಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.