ADVERTISEMENT

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 9:30 IST
Last Updated 15 ಅಕ್ಟೋಬರ್ 2012, 9:30 IST

ಧರ್ಮಪುರ: ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವ ಸಾರಬೇಕು ಎಂದು  ಪ್ರೊ.ವಿ. ಅಗ್ರಹಾರಂ ಎಚ್.ಬಿ. ಶಿವಕುಮಾರ್ ತಿಳಿಸಿದರು.

ಸಮೀಪದ ಆಂಧ್ರಪ್ರದೇಶದ ಕುಂದುರ್ಪಿ ಗ್ರಾಮದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ  “ಕುಂದುರ್ಪಿ   ಸ್ಥಳೀಯ ಚರಿತ್ರೆ~ ಇತಿಹಾಸ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ದಕ್ಷಿಣ ಭಾರತದಲ್ಲಿ ಅನೇಕ ರಾಜ ವಂಶಸ್ಥರು ಆಡಳಿತ ನಡೆಸಿದ್ದು, ಕೊಡುಗೆ ಕೊಟ್ಟಿದ್ದಾರೆ.  ಅವೆಲ್ಲಾ ಇತಿಹಾಸದಲ್ಲಿ ಇಂದು ಸ್ಮಾರಕಗಳಾಗಿ ಉಳಿದಿವೆ. ಆ ಕಾಲದ ಕೋಟೆ ಕೊತ್ತಲು, ಬುರುಜು, ಬಸದಿ, ಗುಮ್ಮಟ, ಸಾಹಿತ್ಯದ ರಚನೆ, ಆಡಳಿತ ವ್ಯವಸ್ಥೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿವೆ. ಆದರೆ, ಸ್ಮಾರಕಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರಿಗೆ ಆಸಕ್ತಿ ಇಲ್ಲದಿರುವುದು ವಿಪರ್ಯಾಸವೇ ಸರಿ. ಅಂದಿನ ಸ್ಮಾರಕಗಳನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಆಂಧ್ರ ಪ್ರದೇಶದ ಕುಂದುರ್ಪಿ ಐತಿಹಾಸಿಕವಾಗಿ ಮಹತ್ವ ಪಡೆದಿದ್ದು, ಇಲ್ಲಿ ಶಾಸನಗಳು, ಬಸದಿಗಳು ಮತ್ತು ದೇವಾಲಯಗಳು ಅಂದಿನ ಧಾರ್ಮಿಕ ಸಾಮರಸ್ಯ ತಿಳಿಸುತ್ತವೆ ಎಂದರು.
ಇತಿಹಾಸ ಪ್ರಾಧ್ಯಾಪಕ ಪ್ರೊ.ವಿ. ವೀರಣ್ಣ,  ಗಡಿನಾಡ ಕನ್ನಡ ಸಾಹಿತ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿದರು.

ವೇದಿಕೆಯಲ್ಲಿ ಜಯದೇವಮೂರ್ತಿ, ಜಯಶಂಕರ್, ಸತ್ಯನಾರಾಯಣಶಾಸ್ತ್ರಿ, ರಾಮಣ್ಣ, ಲಕ್ಷಣ, ಮಲ್ಲಿಕಾರ್ಜುನ, ಆಂಜನೇಯಲು, ಓಬಳೇಶ್, ಧನಂಜಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.