ADVERTISEMENT

ಐದು ಕಡೆ ಗೋಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 11:15 IST
Last Updated 26 ಸೆಪ್ಟೆಂಬರ್ 2011, 11:15 IST

ಹಿರಿಯೂರು: ಜಾನುವಾರುಗಳ ರಕ್ಷಣೆಗೆ ತಾಲ್ಲೂಕಿನ ಮೇಟಿಕುರ್ಕೆ, ಹರ್ತಿಕೋಟೆ ಸೇರಿದಂತೆ ಐದು ಪ್ರಮುಖ ಗ್ರಾಮಗಳಲ್ಲಿ ಗೋಶಾಲೆ ಆರಂಭಿಸಲಾಗುವುದು ಎಂದು ಶಾಸಕ ಡಿ. ಸುಧಾಕರ್ ಭರವಸೆ ನೀಡಿದರು.

ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ವೈಯಕ್ತಿಕವಾಗಿ ಉಚಿತ ಮೇವು ವಿತರಿಸಿ ಅವರು ಮಾತನಾಡಿದರು.

ಸರ್ಕಾರದ ವತಿಯಿಂದ ಮೇಟಿಕುರ್ಕೆ ಗ್ರಾಮದಲ್ಲಿ ಗೋಶಾಲೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಶನಿವಾರ ಮೂರು ಲೋಡ್‌ನಷ್ಟು ಮೇವು ಬಂದಿದೆ. ಆದರೆ ಇಷ್ಟು ಕಡಿಮೆ ಪ್ರಮಾಣದ ಮೇವು ಸಾಕಾಗದು. ಹೀಗಾಗಿ ತಾವು ವೈಯಕ್ತಿಕವಾಗಿ ಮೇವು ಹಂಚುವ ಕಾರ್ಯ ನಿಲ್ಲಿಸುವುದಿಲ್ಲ. ಸರ್ಕಾರದ ಮೇಲೆ ಹಲವು ಬಾರಿ ಒತ್ತಡ ತಂದಿದ್ದರೂ ಜಿಲ್ಲೆಯನ್ನು ಇನ್ನೂ ಬರಪೀಡಿತ ಎಂದು ಘೋಷಣೆ ಮಾಡದಿರುವುದು ವಿಷಾದದ ಸಂಗತಿ. ಮೇವು ವಿತರಣೆಯಲ್ಲಿ ಯಾವುದೇ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶವಿಲ್ಲ. ಗೋಸಂರಕ್ಷಣೆ ಮಾಡುವುದು ನನ್ನ ಆದ್ಯ ಕರ್ತವ್ಯ ಎಂದು ಭಾವಿಸಿ, ಶಾಸಕನಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದು ಅವರು ತಿಳಿಸಿದರು.

 ಕೂಲಿ ಕೆಲಸದವರ ಅಭಾವದಿಂದ ಭತ್ತವನ್ನು ಯಂತ್ರದಿಂದ ಕಟಾವು ಮಾಡುತ್ತಿರುವ ಕಾರಣ ಮೇವು ಸಿಗುತ್ತಿಲ್ಲ. ಗಡಿಯಲ್ಲಿರುವ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಮೇವಿನ ಹುಡುಕಾಟ ನಡೆದಿದೆ. ನಾಲ್ಕು ತಿಂಗಳಿಂದ ಮಳೆಯಿಲ್ಲದ ಕಾರಣಕ್ಕೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಕೆರೆಗಳು ಬತ್ತುತ್ತಿವೆ. ಅಂತರ್ಜಲ ಕುಸಿಯುತ್ತಿದೆ. ಒಂದೆರಡು ವಾರದಲ್ಲಿ ವರುಣನ ಕೃಪೆಯಾಗದಿದ್ದರೆ ಪರಿಸ್ಥಿತಿ ತೀವ್ರ ರೀತಿಯಲ್ಲಿ ಬಿಗಡಾಯಿಸುತ್ತದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಸಿದ್ಧತೆಗೆ ಮುಂದಾಗಬೇಕು ಎಂದು ಸುಧಾಕರ್ ಒತ್ತಾಯಿಸಿದರು.

ಅರ್ಬನ್‌ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವಿ. ಮಾಧವ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ, ಮಾರೇನಹಳ್ಳಿ ಶಿವಣ್ಣ, ಬಿ. ಮಹಾಂತೇಶ್ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಎಂ. ಚಂದ್ರಪ್ಪ, ಕೆ. ವೇಣುಗೋಪಾಲ್ ರಂಗೇನಹಳ್ಳಿ ತಿಪ್ಪೇಸ್ವಾಮಿ, ಪಿ.ಎಸ್. ಗಂಗಮ್ಮ, ಭರತೇಶ್, ರಾಮಣ್ಣ ಮತ್ತಿತರರು ಹಾಜರಿದ್ದರು. ಪರಮೇಶ್ ಕಾರ್ಯಕ್ರಮ ನಿರೂಪಿಸಿದರು. ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.