ADVERTISEMENT

ಐವತ್ತರ ಹೊಸ್ತಿಲಲ್ಲಿ ಬಾಲಕಿಯರ ಸರ್ಕಾರಿ ಶಾಲೆ

ಜಡೇಕುಂಟೆ ಮಂಜುನಾಥ್
Published 19 ಫೆಬ್ರುವರಿ 2012, 5:55 IST
Last Updated 19 ಫೆಬ್ರುವರಿ 2012, 5:55 IST

ಚಳ್ಳಕೆರೆ ಪಟ್ಟಣದ ಚಿತ್ರದುರ್ಗ ರಸ್ತೆಗೆ ಅಂಟಿಕೊಂಡಿರುವ ಹೆಗ್ಗೆರೆ ತಾಯಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಅರ್ಧಶತಕದ ಹೊಸ್ತಿಲಲ್ಲಿದೆ.

ಇಲ್ಲಿ ಇದುವರೆಗೂ ಹತ್ತಾರು ಸಾವಿರ ಬಾಲಕಿಯರು ಶಿಕ್ಷಣ ಪಡೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ವಿದೇಶಗಳಲ್ಲಿ ವೈದ್ಯರು, ಎಂಜಿನಿಯರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ಸಮಾಜ ಸೇವಾ ಕಾರ್ಯಕರ್ತರಾಗಿ, ಶಿಕ್ಷಕರಾಗಿ, ರಾಜಕಾರಣಿಗಳಾಗಿ ದುಡಿಯುತ್ತಿದ್ದಾರೆ.

1965ರಲ್ಲಿ ತಾಲ್ಲೂಕು ಬೋರ್ಡ್‌ನಿಂದ ನಡೆಸಲ್ಪಡುತ್ತಿದ್ದ ಈ ಶಾಲೆಗೆ ಉದಾರ ದೇಣಿಗೆ ನೀಡಿರುವ ಶಿಕ್ಷಣ ಪ್ರೇಮಿ, ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಹೆಗ್ಗೆರೆ ತಾಯಮ್ಮ ಅವರು ಮತ್ತು ಪತಿಯ ಹೆಸರಿನಲ್ಲಿ ಈ ಶಾಲೆ ನಡೆಯುತ್ತಿದೆ.


ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಲು ಇಂತಹ ಶಾಲೆಗೆ 13 ಗುಂಟೆ ಜಾಗ. ಆ ಕಾಲದಲ್ಲಿಯೇ ರೂ ಒಂದು ಲಕ್ಷ ದೇಣಿಗೆ ನೀಡಿ ಹೊಸದಾಗಿ ಕಟ್ಟಡ ಕಟ್ಟಲು ಸಹಕರಿಸಿ, ಸಾವಿರಾರು ಬಾಲಕಿಯರ ಅಕ್ಷರದ ಹಸಿವಿನ ದಾಹವನ್ನು ನೀಗಿಸಿದ ಶಿಕ್ಷಣ ಪ್ರೇಮಿ ಹೆಗ್ಗೆರೆ ತಾಯಮ್ಮ ಈಚೆಗೆ ನಿಧನರಾದರು.

ಈ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾಗುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಲಿದೆ. ಇದಕ್ಕೆ ತಕ್ಕಂತೆ ಪೂರಕವಾಗಿ ಸೌಲಭ್ಯಗಳು ಸಿಗಬೇಕಿದೆ.

ಪ್ರಸ್ತುತ 8ರಿಂದ 9ನೇ ತರಗತಿಯಲ್ಲಿ 987 ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಹದಿಮೂರು ಗುಂಟೆ ಜಾಗದಲ್ಲಿ ವಿದ್ಯಾರ್ಥಿನಿಯರಿಗೆ ಬೇಕಾಗುವ ಕಟ್ಟಡ, ಶೌಚಾಲಯ, ಗ್ರಂಥಾಲಯ, ಬೋಧಕರ ಕೊಠಡಿ, ಅಡುಗೆ ಕೊಠಡಿ ಇದೆ. ಇಲ್ಲಿ ಮಕ್ಕಳಿಗೆ ಬೆಳಗಿನ ಪ್ರಾರ್ಥನೆ ಮಾಡಲು ಸಹ ಅಗತ್ಯವಾದಷ್ಟು ಜಾಗ ಇಲ್ಲ.
ಆಟದ ಮೈದಾನವೂ ಇಲ್ಲಿಲ್ಲ.
 
ಈ ಕಾರಣ ಪಕ್ಕದ ಬಿಸಿನೀರು ಮುದ್ದಪ್ಪ ಸರ್ಕಾರಿ ಶಾಲೆಯ ಮೈದಾನದಲ್ಲಿ ಆಟೋಟಗಳನ್ನು ಮಾಡಿಸಬೇಕಿದೆ. ಇಲ್ಲಿರುವ ಬಾಲಕಿಯರಿಗೆ ಬಹುಮುಖ್ಯವಾಗಿ ಶೌಚಾಲಯ ಸಮಸ್ಯೆ ಕಾಡುತ್ತಿದೆ. 987 ಬಾಲಕಿಯರಿಗೆ ಕೇವಲ 8 ಶೌಚಾಲಯಗಳಿವೆ. ಶಾಲೆಯಲ್ಲಿ 12 ವಿಭಾಗಗದ್ದು, ಇರುವುದು 10 ಕೊಠಡಿಗಳು ಮಾತ್ರ!

ಕಳೆದ ಸಾಲಿನಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಅವರ ಅನುದಾನದಲ್ಲಿ ಒಂದು ಕಟ್ಟಡ ನಿರ್ಮಾಣ ಆಗಿರುವುದರಿಂದ ವಿದ್ಯಾರ್ಥಿಗಳ ವಿಭಾಗಗಳನ್ನು ಹೇಗೋ  ನಿಭಾಯಿಸಬಹುದಾಗಿದೆ ಎನ್ನುತ್ತದೆ ಶಿಕ್ಷಕ ವರ್ಗ.

ಶಾಲೆಯಲ್ಲಿ, ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳ ಅವಶ್ಯಕತೆ ಇದೆ. ಜನಪ್ರತಿನಿಧಿಗಳು ಸರ್ಕಾರದ ವಿವಿಧ ಶಿಕ್ಷಣ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಕೊಡಿಸಿದರೆ ಚಳ್ಳಕೆರೆ ಅಂತಹ ಪಟ್ಟಣದಲ್ಲಿ ಬಾಲಕಿಯರ ಶೈಕ್ಷಣಿಕ ಪ್ರಗತಿಯ ನಿರೀಕ್ಷೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ.

ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳೂ ಸೇರಿದಂತೆ ಇಲ್ಲಿಗೆ ಗ್ರಾಮೀಣ ಭಾಗಗಳಿಂದಲೂ ಶಿಕ್ಷಣ ಪಡೆಯಲು ವಿದ್ಯಾರ್ಥಿನಿಯರು ಬರುತ್ತಾರೆ. ಬಡವರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುವುದು ಕನಸಿನ ಮಾತು. ಅದ್ದರಿಂದ, ಖಾಸಗಿ ಶಾಲೆಗಳ ಹಾವಳಿಗೆ ಕಡಿವಾಣ ಹಾಕಲು ಇಲ್ಲಿರುವ ಸರ್ಕಾರಿ ಶಾಲೆಗೆ ಸರ್ಕಾರದಿಂದ ಹೆಚ್ಚು ಸೌಲಭ್ಯಗಳು ಸಿಗುವಂತೆ ಆಗಬೇಕು ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಪೋಷಕರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT