ADVERTISEMENT

ಕಂಚಿ ವರದರಾಜ ಸ್ವಾಮಿ ರಥೋತ್ಸವ ವೈಭವ

ರಥಕ್ಕೆ ಹಣ ತೂರಿ ಹರಕೆ ಸಲ್ಲಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 2 ಮೇ 2014, 5:54 IST
Last Updated 2 ಮೇ 2014, 5:54 IST
ಹೊಸದುರ್ಗ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಂಚಿಪುರದ ಕಂಚಿ ವರದರಾಜ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ ವೈಭವಯುತವಾಗಿ ನಡೆಯಿತು
ಹೊಸದುರ್ಗ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಂಚಿಪುರದ ಕಂಚಿ ವರದರಾಜ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ ವೈಭವಯುತವಾಗಿ ನಡೆಯಿತು   

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಂಚೀಪುರದ ಕಂಚಿವರದರಾಜ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ ವೈಭವಯುತವಾಗಿ ಜರುಗಿತು.

ಹಸಿರು ತೋರಣ, ಬಣ್ಣ ಬಣ್ಣದ ಬಟ್ಟೆ ಹಾಗೂ ದೊಡ್ಡ ಹೂ ಮಾಲೆಗಳಿಂದ ಸುಂದರವಾಗಿ ಅಲಂಕರಿಸಿದ್ದ ರಥಕ್ಕೆ ಹಿಡುಗಾಯಿ ಸೇವೆ, ಬಲಿ ಅನ್ನ ಪೂಜೆ ಹಾಗೂ ಮಹಾಮಂಗಳಾರತಿ ನಡೆದ ನಂತರ ಸಿಂಗಾರಗೊಂಡಿದ್ದ ಸ್ವಾಮಿಯ ಪ್ರತಿಮೆಯನ್ನು ಮೂರು ಸುತ್ತು ಸುತ್ತಿಸಿ ರಥಕ್ಕೆ ಕೂರಿಸಲಾಯಿತು. ನಂತರ ಭಕ್ತರು ತೇರನ್ನು ಎಳೆದರು.

ಈ ರಥೋತ್ಸವ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ರಾಜ್ಯದ ವಿವಿಧೆಡೆ ನಡೆಯುವ ರಥೋತ್ಸವಕ್ಕೆ ಭಕ್ತರು ಬಾಳೆ ಹಣ್ಣು ತೂರಿ ಭಕ್ತಿ ಅರ್ಪಿಸುವುದು ವಾಡಿಕೆಯಾಗಿದ್ದರೆ, ಇಲ್ಲಿನ ಭಕ್ತರು ದೇವರಿಗೆ ದುಡ್ಡನ್ನು ತೂರುವುದರ ಮೂಲಕ ತಮ್ಮ  ಭಕ್ತಿಯನ್ನು ಸಮರ್ಪಿಸುತ್ತಾರೆ.

ವರದರಾಜ ಸ್ವಾಮಿ ಎಂದರೆ ಬೇಡಿದ ಭಕ್ತರಿಗೆ ವರವನ್ನು ದಯ ಪಾಲಿಸುವ ದೈವ. ಹಾಗಾಗಿ ಭಕ್ತರು  ದೇವರಲ್ಲಿ ಬೇಡಿಕೊಂಡಿದ್ದು ಕೈಗೂಡಿದಲ್ಲಿ ರಥೋತ್ಸವದಂದು ₨ 100ರಿಂದ ಹಿಡಿದು ಲಕ್ಷದವರೆಗೆ ಚಿಲ್ಲರೆ ಹಾಗೂ ನೋಟನ್ನು ತೂರುತ್ತಾರೆ ಎನ್ನುತ್ತಾರೆ ಪುರೋಹಿತರು.

ಈ ಬಾರಿ ಸುಮಾರು ₨ 6ರಿಂದ ₨ 8 ಲಕ್ಷದವರೆಗೆ ದುಡ್ಡನ್ನು ದೇವರಿಗೆ ತೂರಿದ್ದಾರೆ. ಭಕ್ತರು ತೂರಿದ ದುಡ್ಡನ್ನು ಬಡವರು ಆರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು ಎನ್ನುತ್ತಾರೆ ಭಕ್ತರಾದ ರಮೇಶ್‌, ಕಾರ್ತಿಕ್‌.

ರಥೋತ್ಸವದ ಪ್ರಯುಕ್ತ ಏ. 22ರಿಂದಲೂ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ವಿಧಿವಿಧಾನಗಳು ನಡೆದವು. ರಥೋತ್ಸವದ ನಂತರ ನಡೆದ ಮುಳ್ಳಾವಿಗೆ ಪವಾಡ ಭಕ್ತರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.