ADVERTISEMENT

ಕಟಾವಿಗೆ ಅಡ್ಡಿಯಾದ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:00 IST
Last Updated 28 ಅಕ್ಟೋಬರ್ 2011, 9:00 IST

ಹೊಳಲ್ಕೆರೆ: ಮುಂಗಾರಿನಲ್ಲಿ ಕಣ್ಣಾಮುಚ್ಚಾಲೆ ಆಡುವ ಮೂಲಕ ರೈತನ ತುತ್ತು ಅನ್ನಕ್ಕೂ ಸಂಚಕಾರ ತಂದಿಟ್ಟಿದ್ದ ಮಳೆ, ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿದೆ. ಈಗಾಗಲೇ ಬರದಿಂದ ತತ್ತರಿಸಿ ಹೋಗಿರುವ ರೈತನಿಗೆ ಅಳಿದುಳಿದ ಬೆಳೆಗಳ ಕಟಾವಿಗೂ ಮಳೆ ಅಡ್ಡಿಪಡಿಸುತ್ತಿದೆ.

 ಉತ್ತರಾ, ಹಸ್ತ, ಚಿತ್ತಾದಂತಹ ಘಟಾನುಘಟಿ ಮಳೆಗಳೇ ಬರದಿದ್ದರಿಂದ ತೀವ್ರ ನಿರಾಸೆ ಹೊಂದಿದ್ದ ರೈತ, ಸ್ವಾತಿ ಮಳೆಯ ಬಗ್ಗೆಯೂ ನಂಬಿಕೆ ಕೈಬಿಟ್ಟಿದ್ದ. ಆದರೆ, ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ ಈ ಮಳೆ ಕಳೆದ ಒಂದು ವಾರದಿಂದ ಗುಡುಗು ಸಮೇತ ಸುರಿಯುತ್ತಿದೆ.

ಮಳೆ ಕೈಕೊಟ್ಟಿದ್ದರಿಂದ ಈ ವರ್ಷ ತಾಲ್ಲೂಕಿನಲ್ಲಿ ಶೇ. 80 ರಷ್ಟು ಬೆಳೆ ಹಾನಿ ಸಂಭವಿಸಿದೆ. ಬೆಟ್ಟದ ತಪ್ಪಲು ಮತ್ತು ತಗ್ಗು ಪ್ರದೇಶಗಳಲ್ಲಿ ಅಲ್ಪಸ್ವಲ್ಪ ಬೆಳೆ ಬಂದಿದ್ದು, ಈಗ ಕಟಾವಿನ ಹಂತದಲ್ಲಿದೆ. ತೇವಾಂಶ ಕೊರತೆಯಿಂದ ಮೆಕ್ಕೆಜೋಳ ನಿರೀಕ್ಷಿತ ಪ್ರಮಾಣದಲ್ಲಿ ತೆನೆ ಕಟ್ಟಿಲ್ಲ.

ಕೆಲವೆಡೆ ತೆನೆಯಾಗುವ ಮುನ್ನವೇ ಸಂಪೂರ್ಣ ಒಣಗಿ ಹೋಗಿದೆ. ಹೇಗೋ ಸಣ್ಣಪುಟ್ಟ ತೆನೆಗಳನ್ನು ಕಟಾವು ಮಾಡಲು ಹೊರಟಿದ್ದ ರೈತರು ಅನಿರೀಕ್ಷಿತ ಮಳೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಮುಂಚಿತವಾಗಿ ಬಿತ್ತನೆ ಮಾಡಿದ ರೈತರು ಈಗಾಗಲೇ ತೆನೆ ಕಟಾವು ಮಾಡಿ, ಗೂಡು ಹಾಕಿದ್ದಾರೆ. ಆದರೆ ತಡವಾಗಿ ಬಿತ್ತನೆ ಮಾಡಿದ ರೈತರು ಈಗ ಕಟಾವು ಕಾರ್ಯ ಆರಂಭಿಸಿದ್ದು, ಮಳೆ ಅಡ್ಡಿಪಡಿಸುತ್ತಿದೆ.

ಕಳೆದ ವರ್ಷ ಕಟಾವಿನ ಸಮಯದಲ್ಲಿ ಮಳೆ ಹೆಚ್ಚಾಗಿ ತೆನೆಗಳ ಒಳಗೇ ಕಾಳುಗಳು ಮೊಳಕೆ ಒಡೆದಿದ್ದವು. ಹೊಲಗಳಲ್ಲಿ ನೀರು ಹೆಚ್ಚಾಗಿ ಕೆಲವರು ಮೆಕ್ಕೆಜೋಳವನ್ನು ಕಟಾವು ಮಾಡದೆ ಹಾಗೇ ಬಿಟ್ಟಿದ್ದು, ಲಕ್ಷಾಂತರ ರೂ ನಷ್ಟ ಅನುಭವಿಸಿದ್ದರು. ಈ ಬಾರಿಯೂ ವಾರಗಟ್ಟಲೆ ಮಳೆ ಹಿಡಿದರೆ ಕಾಳು ಮೊಳಕೆ ಒಡೆಯುವ ಭಯ ರೈತರಲ್ಲಿದೆ.

ಹೈಬ್ರಿಡ್ ಹತ್ತಿಯೂ ಕಾಯಿಬಿಚ್ಚಿ ಅರಳಿದ್ದು, ಬಿಡಿಸುವ ಹಂತದಲ್ಲಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಹತ್ತಿ ಬೆಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಈಗ ಬಿಸಿಲಿನಿಂದ ಗಿಡದಲ್ಲಿನ ಕಾಯಿಗಳ ಬಿಚ್ಚಿಕೊಂಡು ಹತ್ತಿ ಅರಳಿದೆ. ಆದರೆ ಬಿರುಮಳೆಯಿಂದ ಹತ್ತಿ ತೊಳೆಗಳು ನೆನೆದು, ಕೆಳಗೆ ಬೀಳುತ್ತಿವೆ. ಮಳೆಯಿಂದ ಹತ್ತಿಯ ಬಣ್ಣ ಕೆಡುವುದಲ್ಲದೆ, ಮಣ್ಣು ಸಿಡಿದು ಕೊಳೆಯಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ ಎಂಬ ಕೊರಗು ಇಲ್ಲಿನ ರೈತರದು.

ಮಳೆಯಿಂದ ಅಂತರ್ಜಲ ಹೆಚ್ಚಾಗಿ, ತೋಟಗಳಿಗೆ ಅನುಕೂಲವಾಗುತ್ತದೆ ಎಂಬ ಸಂತಸ ಒಂದೆಡೆಯಾದರೆ, ಕಟಾವಿಗೆ ಬಂದ ಬೆಳೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಇಲ್ಲಿನ ರೈತರನ್ನು ಕಾಡುತ್ತಿದೆ.
ಸಾಂತೇನಹಳ್ಳಿ ಕಾಂತರಾಜ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.