ADVERTISEMENT

ಕರ್ಪೂರದಾರತಿ ಸಂಭ್ರಮದಲ್ಲಿ ತೇಲಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 7:05 IST
Last Updated 21 ಫೆಬ್ರುವರಿ 2011, 7:05 IST

ಹಿರಿಯೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಇಲ್ಲಿನ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಕರ್ಪೂರದ ಆರತಿ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಕರ್ಪೂರ ಹಚ್ಚುವ ಮೂಲಕ ಸಂಭ್ರಮಿಸಿದರು.

ರಾತ್ರಿ 8.30ರ ವೇಳೆಗೆ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾ ಮಹೇಶ್ವರ ಸ್ವಾಮಿ ರಥಾವರೋಹಣ ಉತ್ಸವದ ನಂತರ, ದೇವಸ್ಥಾನದ ಒಳ ಆವರಣದಲ್ಲಿರುವ ಸುಮಾರು 56 ಅಡಿ ಎತ್ತರದ ಸ್ತಂಭದ ಮೇಲೆ ಪರಿಣತ ವ್ಯಕ್ತಿಯೊಬ್ಬ ಹತ್ತಿ ಕಂಬದ ಸುತ್ತ ಇರುವ ಎಂಟು ಕಬ್ಬಿಣದ ಸೌಟುಗಳಲ್ಲಿ ಕರ್ಪೂರ ತುಂಬಿಸಿ ದೀಪ ಹಚ್ಚಿದ ತಕ್ಷಣ, ದೀಪ ಸ್ತಂಭದ ಸುತ್ತ ನೆರೆದಿದ್ದ ಸಾವಿರಾರು ಭಕ್ತರು ಸ್ತಂಭದ ಕಟ್ಟೆಯ ಸುತ್ತಮುತ್ತ ಕರ್ಪೂರವನ್ನು ರಾಶಿ ಹಾಕಿ ಹಚ್ಚತೊಡಗಿದಾಗ ದೇವಸ್ಥಾನದ ಇಡೀ ಆವರಣ ಬೆಳಕಿನಿಂದ ಝಗಮಗಿಸುತ್ತಿತ್ತು.

ಶೌರ್ಯದ ಪ್ರತೀಕ
ಸ್ತಂಭಕ್ಕೆ ನಿರ್ಮಿಸಿರುವ ಕಟ್ಟೆ ಸೇರಿ ಸುಮಾರು 58 ಅಡಿ ಎತ್ತರದ ದೀಪ ಸ್ತಂಭದ ಮೇಲೆ ಹೋಗಿ ಕಬ್ಬಿಣದ ಸೌಟುಗಳಲ್ಲಿ ದೀಪ ಹಚ್ಚುವ ಪದ್ಧತಿ ದಕ್ಷಿಣ ಭಾರತದಲ್ಲಿ ತುಂಬಾ ವಿರಳ. ಈ ಪ್ರದೇಶವನ್ನು ಆಳುತ್ತಿದ್ದ ರಾಜರು ತಮ್ಮ ಭಕ್ತಿ ಹಾಗೂ ಶೌರ್ಯದ ಪ್ರತೀಕವಾಗಿ ಈ ಆಚರಣೆಯನ್ನು ಜಾರಿಗೆ ತಂದಿದ್ದರು ಎಂದು ಹಿರಿಯರು ಹೇಳುತ್ತಾರೆ. 540 ವರ್ಷ ಕಳೆದರೂ ತುಕ್ಕು ಹಿಡಿಯದ 8 ಕಬ್ಬಿಣದ ಸೌಟುಗಳಿಗೆ ಕರ್ಪೂರ ಹಾಕಿ ಹಚ್ಚುವುದನ್ನು ನೋಡುವುದು ರೋಮಾಂಚನ ಉಂಟು ಮಾಡುತ್ತದೆ.

ಕಾರ್ತೀಕಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಈ ಸೌಟುಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ನಾಲ್ಕು ಮಿಟರ್ ಬಟ್ಟೆಯಲ್ಲಿ 8 ಕೆ.ಜಿ. ಹತ್ತಿ ಬೀಜವನ್ನು 8 ಕೆ.ಜಿ. ಶೇಂಗಾ ಅಥವಾ ಹರಳೆಣ್ಣೆಯಲ್ಲಿ ಒಂದು ದಿನವೆಲ್ಲಾ ನೆನೆಸಿ ದೀಪ ಹಚ್ಚಿದರೆ, ಸತತ ಆರು ಗಂಟೆ ಕಾಲ ದೀಪ ಉರಿಯುತ್ತದೆ. ಆಗ ದೀಪದ ಬೆಳಕು 3 ಕಿ.ಮೀ. ದೂರದವರೆಗೂ ಕಾಣುತ್ತದೆ ಎಂಬ ಮಾತಿದೆ. ಆದರೆ, ಇತ್ತೀಚೆಗೆ ಹಿಂದಿನಂತೆ ಹತ್ತಿ ಬೀಜ ನೆನೆಸಿ ದೀಪ ಹಚ್ಚುವ ಪದ್ಧತಿ ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.