ADVERTISEMENT

ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ

ವಿಧಾನ ಪರಿಷತ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 10:27 IST
Last Updated 2 ಆಗಸ್ಟ್ 2013, 10:27 IST

ಚಿತ್ರದುರ್ಗ: ಕಾಂಗ್ರೆಸ್  ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಗುರುವಾರ ಜಿಲ್ಲಾ ಕಚೇರಿಯಲ್ಲಿ ಕೆಪಿಸಿಸಿ ಚುನಾವಣಾ ವೀಕ್ಷಕರಿಗೆ ಅರ್ಜಿ ಸಲ್ಲಿಸುವ ಜೊತೆಗೆ ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಸೇತುರಾಮ್, ಮುಖಂಡ ಮೆಹಬೂಬ್ ಪಾಷ, ಮಾಜಿ ಎಂ.ಎಲ್‌ಸಿ ಡಿ.ಬಿ.ರಾಜು, ಕೆಪಿಸಿಸಿ ಸದಸ್ಯ ಚಳ್ಳಕೆರೆಯ ಸಿ.ವೀರಭದ್ರ ಬಾಬು, ಚಿ.ಪ್ರಭುದೇವ್, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೊಳಲ್ಕೆರೆಯ ಎಚ್. ಎಂ.ಷಣ್ಮುಖಪ್ಪ , ಭರಮಸಾಗರದ ಜಿ.ಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ , ಹಾಲಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ, ನಗರಸಭಾ ಮಾಜಿ ಸದಸ್ಯ ಎಂ.ಚಂದ್ರಶೇಖರ್, ಹಿರಿಯೂರಿನ ಅಮೃತೇಶ್ವರಸ್ವಾಮಿ, ಜೆಜಿ ಹಳ್ಳಿಯ ಜಿ.ಜಯರಾಮಯ್ಯ ಅವರು ಕಾಂಗ್ರೆಸ್ ವೀಕ್ಷಕರಿಗೆ ಸ್ವವಿವರ ಹಾಗೂ ಸಾಧನೆಯ ಪತ್ರಗಳನ್ನೊಳಗೊಂಡ ಮಾಹಿತಿಗಳನ್ನು ಸಲ್ಲಿಸಿದರು.

ಗುರುವಾರ ಬೆಳಿಗ್ಗೆಯಿಂದಲೇ ಜಿಲ್ಲಾ ಕಾಂಗ್ರೆಸ್ ಕಚೇರಿ ಸ್ಪರ್ಧಾಕಾಂಕ್ಷಿಗಳು ಹಾಗೂ ಬೆಂಬಲಿಗರಿಂದ ತುಂಬಿ ಹೋಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಆಕಾಂಕ್ಷಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ವೀಕ್ಷಕರಿಗೆ ನೀಡಿದಲ್ಲದೇ ತಮಗೇ ಟಿಕೆಟ್‌ಗೆ ಶಿಫಾರಸು ಮಾಡಲು ದುಂಬಾಲು ಬೀಳುತ್ತಿದ್ದದು ಸಾಮಾನ್ಯವಾಗಿತ್ತು.

ಕಾಂಗ್ರೆಸ್ ಪಕ್ಷದ ಸಭೆ, ಸಮಾರಂಭ, ವೀಕ್ಷಕರು ಬಂದಾಗ ಪ್ರತಿ ಸಾರಿಯೂ ಗಲಾಟೆ, ಗೊಂದಲ ಸಾಮಾನ್ಯ ಎನ್ನುವಂತಾಗಿತ್ತು. ಆದರೆ ಇಂದು ನಡೆದ ವೀಕ್ಷಕರ ಸಭೆಯಲ್ಲಿ ಯಾವುದೇ ಗಲಾಟೆಗೆ ಅವಕಾಶವಿಲ್ಲದಂತೆ ಸಭೆ ಶಾಂತಿಯುತವಾಗಿ ನಡೆಯಿತು.
ಬೆಂಗಳೂರಿನಿಂದ ವೀಕ್ಷಕರಾಗಿ  ಶಾಸಕ ಎಂ.ಎ.ಕೃಷ್ಣಪ್ಪ, ಮಾಜಿ ಸಚಿವ ಸಿದ್ದುನ್ಯಾಮೇಗೌಡ, ಮಾಜಿ ಶಾಸಕ ಎನ್.ಸಂಪಂಗಿ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.