ಚಿತ್ರದುರ್ಗ: ತರಾಸು ಮಹಾನ್ ಕಾದಂಬರಿಕಾರ. ಕಲ್ಪನೆಯಲ್ಲಿ ಅರಳಿದ ವಸ್ತುವನ್ನು ಐತಿಹಾಸಿಕ ಕ್ಷಣಗಳೊಂದಿಗೆ ಸಮೀಕರಿಸಿ ಕಾದಂಬರಿ ರಚಿಸುತ್ತಿದ್ದರು ಎಂದು ಸಂಶೋಧಕ, ಲೇಖಕ ಪ್ರೊ.ಶ್ರೀಶೈಲ ಆರಾಧ್ಯ ಸ್ಮರಿಸಿದರು.
ಪತ್ರಕರ್ತರ ಬಳಗ ವತಿಯಿಂದ ನಗರದ ಕೃಷ್ಣರಾಜೇಂದ್ರ ಗ್ರಂಥಾಲಯ ಆವರಣದಲ್ಲಿ ಗುರುವಾರ ಸರಳವಾಗಿ ಆಯೋಜಿಸಿದ್ದ ತರಾಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದುರ್ಗದ ಇತಿಹಾಸ ಕುರಿತು ರೋಮಾಂಚನ ಹುಟ್ಟುವ ರೀತಿಯಲ್ಲಿ ಐತಿಹಾಸಿಕ ಕಾದಂಬರಿ ಮಾಲೆಯನ್ನು ರಚಿಸಿ ನಾಡಿನಾದ್ಯಂತ ಪಸರಿಸಿದ ಕೀರ್ತಿ ತ.ರಾ. ಸುಬ್ಬರಾಯರು (ತರಾಸು) ಅವರಿಗೆ ಸಲ್ಲುತ್ತದೆ ಎಂದು ನುಡಿದರು.
ಮಣ್ಣಿನ ಋಣ ತೀರಿಸುವ ಅದಮ್ಯ ಬಯಕೆ, ಶ್ರದ್ಧೆ ತರಾಸು ಅವರಲ್ಲಿತ್ತು. ಇಲ್ಲಿನ ಇತಿಹಾಸದ ಕುರಿತು ದುರ್ಗಾಸ್ತಮಾನ, ರಕ್ತರಾತ್ರಿ ಸೇರಿದಂತೆ ಅನೇಕ ಕಾದಂಬರಿಗಳನ್ನು ಬರೆದು ದುರ್ಗದ ಕೀರ್ತಿಯನ್ನು ಹೆಚ್ಚಿಸಿದರು.
ಇವರು ಕಾದಂಬರಿ ಪ್ರಕಟಿಸಿದ ನಂತರ ಏಳು ಸುತ್ತಿನ ಕೋಟೆ ವೀಕ್ಷಿಸಲು ಜನತೆ ದಾಂಗುಡಿಯಿಟ್ಟರು ಎಂದರು.
ತರಾಸು ಅವರ ಭಾಷೆ, ಭಾವ, ಸನ್ನಿವೇಶ ಅನನ್ಯ. ಸೂಕ್ಷ್ಮ ಹಾಗೂ ಚಿತ್ತಾರವಾಗಿ ಬರೆಯುವುದರಲ್ಲಿ ಸಿದ್ಧಹಸ್ತರು. ದೊರೆಯಾದವನು ಹೇಗಿರಬೇಕು ಎನ್ನುವುದನ್ನು ಮದಕರಿನಾಯಕರ ಪಾತ್ರದ ಮೂಲಕ ತೋರಿಸಿದ್ದಾರೆ ಎಂದರು.
ದುರ್ಗಾಸ್ತಮಾನ ಕಾದಂಬರಿಯಲ್ಲಿ ಬರುವ ದೊರೆ ಮತ್ತು ದೊರೆಯ ಗುರು ನಡುವಿನ ಸಂದರ್ಭ ಅತ್ಯದ್ಭುತವಾಗಿದೆ. ಅರಮನೆ ದಾರಿ ತಪ್ಪಿದಾಗ ಗುರುಮನೆ ದಾರಿ ತೋರಿಸಬೇಕು ಎನ್ನುವುದನ್ನು ಸಂದರ್ಭ, ಸನ್ನಿವೇಶ ಹೇಳುತ್ತದೆ. ಜತೆಗೆ ಇಲ್ಲಿ ದೊರೆ ತನ್ನ ಗುರುವಿನ ಎದುರು ದೊರೆಯ ದರ್ಪದಲ್ಲಿ ಮಾತನಾಡುವುದು, ನಂತರ ಆ ಸಂದರ್ಭದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲವನ್ನೂ ಚಿತ್ರಿಸಿದ್ದಾರೆ. ಈ ಸಂದರ್ಭವನ್ನು ಮುರುಘಾಮಠದ ಹಿರಿಯ ಶ್ರೀಗಳು ಪದೇ ಪದೇ ಓದುವಂತೆ ಹೇಳುತ್ತಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿದರು.
ಯುವ ಮುಖಂಡ ಗೋಪಾಲಸ್ವಾಮಿ ನಾಯಕ, ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಹಾಗೂ ಪತ್ರಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.