ADVERTISEMENT

ಕಾರ್ಮಿಕರ ಬಾಕಿ ಹಣ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 5:45 IST
Last Updated 2 ಜೂನ್ 2011, 5:45 IST
ಕಾರ್ಮಿಕರ ಬಾಕಿ ಹಣ ಪಾವತಿಗೆ ಆಗ್ರಹ
ಕಾರ್ಮಿಕರ ಬಾಕಿ ಹಣ ಪಾವತಿಗೆ ಆಗ್ರಹ   

ಹಿರಿಯೂರು: ಇಲ್ಲಿನ ವಾಣಿ ವಿಲಾಸ ಸಹಕಾರ ಸಕ್ಕರೆ ಕಾರ್ಖಾನೆಯಿಂದ ಕಾರ್ಮಿಕರನ್ನು ಬಿಡುಗಡೆಗೊಳಿಸಿ ಒಂಬತ್ತು ವರ್ಷಗಳಾಗಿದೆ. ಅವರಿಗೆ ಸಲ್ಲಬೇಕಿರುವ ನ್ಯಾಯಬದ್ಧವಾದ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ರೈತ-ಕಾರ್ಮಿಕರ ಹಿತರಕ್ಷಣಾ ಹೋರಾಟ ಸಮಿತಿ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು.

ಕಾರ್ಖಾನೆಯಲ್ಲಿ ದುಡಿಯುತ್ತಿದ್ದ 416 ಕಾರ್ಮಿಕರಲ್ಲಿ ಈಗಾಗಲೇ 65 ಕಾರ್ಮಿಕರು ಮೃತಪಟ್ಟಿದ್ದಾರೆ. ಬದುಕಿ ಉಳಿದಿರುವ ಕಾರ್ಮಿಕರ ಸ್ಥಿತಿ ಯಾರಿಗೂ ಹೇಳುವಂತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಗಗನಕ್ಕೇರಿರುವ ದಿನಸಿ ಇತ್ಯಾದಿ ಸಾಮಾನುಗಳ ಬೆಲೆಗಳು ಹೆಚ್ಚಿರುವ ಜೀವನಮಟ್ಟದಲ್ಲಿ ಸಿಲುಕಿ ಕಾರ್ಮಿಕರು ನಲುಗಿ ಹೋಗಿದ್ದಾರೆ. ಕೂಲಿಕಾರರಿಗಿಂತಲೂ ನಿಕೃಷ್ಟ ಬದುಕು ಅವರದ್ದಾಗಿದೆ. ಬಾಕಿ ಪಾವತಿಸಲು ಇನ್ನೂ ವಿಳಂಬ ಮಾಡಿದರೆ ಬದುಕುವ ಆಸೆಯನ್ನೇ ಕಾರ್ಮಿಕರು ಕೈಬಿಡಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.

ಏ. 12 ರಂದು ಬೇಡಿಕೆ ಈಡೇರಿಸುವಂತೆ ತಹಶೀಲ್ದಾರರಿಗೆ ಮನವಿ ಅರ್ಪಿಸಲಾಗಿತ್ತು. ಮೇ 6ರ ಒಳಗೆ ಬೇಡಿಕೆ ಈಡೇರಿಸದಿದ್ದರೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ತಹಶೀಲ್ದಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಕ್ಕರೆ ಕಾರ್ಖಾನೆಗೆ ಬರಬೇಕಿರುವ ಬಾಕಿ ಬಗ್ಗೆ ತೀರ್ಮಾನಕ್ಕೆ ಬರಲು ಇನ್ನೂ 15-20 ದಿನ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ಧರಣಿಯನ್ನು ಮುಂದೂಡಲಾಗಿತ್ತು. ತಹಶೀಲ್ದಾರರು ಪ್ರಾಧಿಕಾರದವರ ಜತೆ ಮಾತುಕತೆ ನಡೆಸಿದ ನಂತರ, ಅವರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿರುವುದಾಗಿ ತಿಳಿದು ಬಂದಿದೆ. ಹೀಗಾಗಿ, ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.

ಮನವಿ
ತಹಶೀಲ್ದಾರರು ಮತ್ತು ಸಕ್ಕರೆ ಕಾರ್ಖಾನೆಯ ವಿಶೇಷಾಧಿಕಾರಿಗಳು ಹಾಗೂ ಸಕ್ಕರೆ ನಿರ್ದೇಶಕರು ಒಟ್ಟಿಗೆ ಸಮಸ್ಯೆ ಬಗ್ಗೆ ಚರ್ಚಿಸಿ, ರಾಜ್ಯ ಸರ್ಕಾರಕ್ಕೆ ಕಾರ್ಮಿಕರ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟು, ಸರ್ಕಾರದಿಂದ ಕಾರ್ಖಾನೆಗೆ ಮೃದುಸಾಲ ಪಡೆದು ಕಾರ್ಮಿಕರಿಗೆ ಕೊಡಬೇಕಿರುವ ಬಾಕಿ ಹಣ ಪಾವತಿಸಬೇಕು. ಭವಿಷ್ಯ ನಿಧಿ ಇಲಾಖೆಯಿಂದ ನಿರ್ಧಾರವಾಗುವ ಪಿಂಚಣಿ ಸೌಲಭ್ಯವನ್ನು ಜರೂರಾಗಿ ಕೊಡಿಸಿಕೊಡಬೇಕು. ಇಲ್ಲವಾದಲ್ಲಿ ಜೂನ್ 15ರಂದು ತಾಲ್ಲೂಕು ಕಚೇರಿ ಮುಂಭಾಗ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಎಲ್ಲಾ ಕಾರ್ಮಿ ಕರು ಕುಟುಂಬ ಸಮೇತ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ವಾಣಿ ಸಕ್ಕರೆ ನೌಕರರ ಸಂಘದ ಎಂ.ಆರ್. ಪುಟ್ಟಸ್ವಾಮಿ, ಹೊರಕೇರಪ್ಪ, ನರೇಂದ್ರ, ಸಿ. ಸಿದ್ದರಾಮಣ್ಣ, ವೀರಣ್ಣ, ವೆಂಕಟಾಚಲಶೆಟ್ಟಿ, ತುಳಸೀದಾಸ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ನಂತರ ತಹಶೀಲ್ದಾರ್‌ರಿಗೆ ಬೇಡಿಕೆಗಳ ಮನವಿ ಅರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.