ADVERTISEMENT

ಕೃಷ್ಣಾ ‘ಐ’ ತೀರ್ಪು: ಅನ್ಯಾಯ

ಶಾಸಕ ಶಿವಮೂರ್ತಿ ನಾಯ್ಕ ಆರೋಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 6:08 IST
Last Updated 2 ಡಿಸೆಂಬರ್ 2013, 6:08 IST

ಚಿತ್ರದುರ್ಗ: ಕೃಷ್ಣಾ ನ್ಯಾಯಾಧೀಕರಣ ನೀಡಿರುವ ತೀರ್ಪಿನಿಂದಾಗಿ ಬಯಲು ಸೀಮೆಯ ಐದು ಜಿಲ್ಲೆಗಳಿಗೆ ಅನ್ಯಾಯವಾಗಿದ್ದು, ಈ ತೀರ್ಪನ್ನು ನಾನು ವಿರೋಧಿಸುತ್ತೇನೆ ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಶಿವಮೂರ್ತಿ ನಾಯ್ಕ ಹೇಳಿದರು.

ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡುವಾಗ ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು.

ಈ ಐದು ಪ್ರದೇಶಗಳಲ್ಲಿ ಸಿಹಿ ನೀರು, ಶುದ್ಧ ನೀರು ದೊರೆಯುವುದು ಮರೀಚಿಕೆಯಾಗಿದೆ. ಉಪ್ಪು ಮಿಶ್ರಿತ ಗಡಸು ನೀರು, ಫ್ಲೋರೈಡ್, ಕ್ಲೋರೈಡ್, ಲೆಡ್ ಪಾದರಸದಂತಹ ವಿಷ ಪೂರಿತ ನೀರು ಲಭ್ಯವಾಗುತ್ತಿದೆ.ಈ ನೀರನ್ನೇ ಜನರು ಕುಡಿದು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ ಎಂದರು.

ಡಾ.ನಂಜುಂಡಪ್ಪ ವರದಿ ಅನ್ವಯ ಈ ಜಿಲ್ಲೆಗಳಲ್ಲಿ ಅತೀ ಹೆಚ್ಚು ಕಡು ಬಡವರು, ಬಿಪಿಎಲ್ ಕುಟುಂಬಗಳು ವಾಸಿಸುತ್ತಿವೆ. ಇದನ್ನು ಪರಿಗಣಿಸದ ಕೃಷ್ಣಾ ನ್ಯಾಯಾಧೀಕರಣ ಈ ಜಿಲ್ಲೆಗಳಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಾವಿರ ಅಡಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಕೃಷ್ಣಾ ನ್ಯಾಯಾಧೀಕರಣ ನೀಡಿರುವ ತೀರ್ಪು ಪುನರ್ ಪರಿಶೀಲನೆಯಾಗಬೇಕು. ಈ ಭಾಗಕ್ಕೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು.
 
ಈ ಸಂಬಂಧ ಸಚಿವರೊಂದಿಗೆ ಇಲ್ಲಿನ ಶಾಸಕರೆಲ್ಲ ಒಟ್ಟಾಗಿ ಸೇರಿ ಚರ್ಚಸುತ್ತೇವೆ. ಈಗಾಗಲೇ ಅಧಿವೇಶನದ ವೇಳೆ ಈ ಭಾಗದ ಶಾಸಕರು ಮಾತುಕತೆ ನಡೆಸಿದ್ದು, ಒಗ್ಗೂಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ.ಸೇತೂರಾಂ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ಮುಖಂಡ ಬಿ.ಟಿ.ಜಗದೀಶ್ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಆಡಳಿತ ಪಕ್ಷದಿಂದಲೇ ವಿರೋಧ
ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತೀರ್ಪು ಹೊರ ಬಿದ್ದ ತಕ್ಷಣವೇ ಕೃಷ್ಣಾ ನ್ಯಾಯಾಧೀಕರಣ ನೀಡಿರುವ ತೀರ್ಪು ರಾಜ್ಯದ ಮಟ್ಟಿಗೆ ಐತಿಹಾಸಿಕ ತೀರ್ಪು ಎನ್ನುವುದಾಗಿ ಹೇಳಿಕೆ ನೀಡಿದ ಬೆನ್ನ ಹಿಂದೆಯೇ ಆಡಳಿತ ಪಕ್ಷದ ಶಾಸಕ ಶಿವಮೂರ್ತಿ ನಾಯ್ಕ ವಿರೋಧ ವ್ಯಕ್ತ ಪಡಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.