ADVERTISEMENT

ಕೆಜೆಪಿ ಸೇರಿರುವುದು ಸತ್ಯಕ್ಕೆ ದೂರ: ಬದ್ರಿನಾಥ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 5:31 IST
Last Updated 9 ಏಪ್ರಿಲ್ 2013, 5:31 IST

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ಪಂಚಾಯ್ತಿಯ ಬಿಜೆಪಿ 10 ಸದಸ್ಯರು ಕೆಜೆಪಿ ಸೇರಿದ್ದಾರೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದ ಸಂಗತಿ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬದ್ರಿನಾಥ್ ಸ್ಪಷ್ಟಪಡಿಸಿದರು.

ಮಾಜಿ ಶಾಸಕ ಎಂ. ಚಂದ್ರಪ್ಪ ಅವರು ಬಿಜೆಪಿಯ ಸದಸ್ಯರಿಗೆ ನಿಜಾಂಶ ಹೇಳದೇ ಕಾರ್ಯಕ್ರಮಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ತಾ.ಪಂ. ಅಧ್ಯಕ್ಷ ಮೋಹನ್‌ನಾಗರಾಜ್ ಸಹ ಏನೋ ಮಾತನಾಡಬೇಕಿದೆ ಎನ್ನುವುದಾಗಿ ಸದಸ್ಯರನ್ನು ಅವರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಹೋದ ಸದಸ್ಯರ ಹೆಸರು ಬರೆದುಕೊಂಡು ಕೆಜೆಪಿ ಸೇರಿದ್ದಾರೆ ಎನ್ನುವುದಾಗಿ ಘೋಷಿಸಲಾಗಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಹೋಗದ ಕೆಲವು ಸದಸ್ಯರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು.

ಪಕ್ಷದ ನಿಷ್ಠಾವಂತ ಐದು ಮಂದಿ ಸದಸ್ಯರು ಬಿಜೆಪಿಯಲ್ಲಿ ಉಳಿಯುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ಶೇಖರ್ ಮತ್ತು ಪಾರ್ವತಮ್ಮ ಎನ್ನುವ ಇಬ್ಬರು ಸದಸ್ಯರು ದೂರವಾಣಿ ಮೂಲಕ ಮಾತನಾಡಿ, ನಾವು ಬಿಜೆಪಿ ಪಕ್ಷದಲ್ಲೇ ಮುಂದುವರಿಯುತ್ತೇವೆ ಎನ್ನುವುದಾಗಿ ತಿಳಿಸಿದ್ದಾರೆ. ಆದರೆ, ಮಾಜಿ ಶಾಸಕ ಚಂದ್ರಪ್ಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಸದಸ್ಯರ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಅವರ ಘನತಗೆ ಶೋಭೆ ತರುವಂತದ್ದಲ್ಲ ಎಂದರು.

ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸಿದ ಚಂದ್ರಪ್ಪ ಈಗ ಬಿಜೆಪಿ ಪಕ್ಷ ಒಡೆಯುವ ಕೆಲಸ ಮಾಡುವುದು ಸರಿಯಲ್ಲ. ಅನಗತ್ಯವಾಗಿ ಸುಳ್ಳು ಹೇಳಿಕೆ ನೀಡುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸಬಾರದು. ಯಾರೇ ಆಗಲಿ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಬೇಕೇ ಹೊರತು ವಿನಃಕಾರಣ ಗಿಮಿಕ್ ಮಾಡುವ ಮೂಲಕ ವಾಮ ಮಾರ್ಗದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಅವರು ಮತ್ತೆ ಇಂತಹ ಹೇಳಿಕೆ ನೀಡದಂತೆ ನಡೆದುಕೊಳ್ಳಲಿ ಎಂದರು.

ಬಿಜೆಪಿ ವಕ್ತಾರ ಎಚ್.ಎಂ. ಮೋಹನ್, ಹೊಳಲ್ಕೆರೆ ತಾ.ಪಂ. ಉಪಾಧ್ಯಕ್ಷೆ ಪುಟ್ಟಿಬಾಯಿ, ಸದಸ್ಯರಾದ ರಾಜಶೇಖರ್, ಲವಮಧು, ಪ್ರೇಮಾ ಧನಂಜಯ, ಲಕ್ಷ್ಮೀ ರುದ್ರೇಶ್ ಹೊಳಲ್ಕೆರೆ ತಾಲ್ಲೂಕು ಬಿಜೆಪಿ ಯುವ ಘಟಕದ ಜಯಸಿಂಹ ಇದ್ದರು.

22,973 ಮಂದಿ ಹಾಜರು
ಚಿತ್ರದುರ್ಗ
: ಜಿಲ್ಲೆಯ 99 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಏ. 8ರಂದು ನಡೆದ ಗಣಿತ ವಿಷಯದ ಪರೀಕ್ಷೆಗೆ 22,973 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.
ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.