ಭರಮಸಾಗರ: ಇಲ್ಲಿನ ದೊಡ್ಡಕೆರೆ ಒತ್ತುವರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ಮಂಗಳವಾರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.ಕಳೆದ ಬಾರಿ ಈ ಭಾಗದಲ್ಲಿ ಉತ್ತಮ ಮಳೆಯಾಗಿ ಕೆರೆ ತುಂಬಿ, ಹಿನ್ನೀರು ಇಲ್ಲಿನ ಇಂದಿರಾ ಕಾಲೊನಿ ಬಳಿಯ ಮನೆಗಳಿಗೆ ನುಗ್ಗಿ ತೊಂದರೆಯಾಗಿತ್ತು.
ಆ ಸಂದರ್ಭದಲ್ಲಿ ಮನೆಕಳೆದುಕೊಂಡ ಸಂತ್ರಸ್ತರು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ನಂತರ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನೀಡಲಾಗಿದೆ.
ಇಲ್ಲಿನ ದೊಡ್ಡಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, 317.20 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ, 197.44 ಹೆಕ್ಟೇರ್ ನೀರು ಸಂಗ್ರಹ ವಿಸ್ತೀರ್ಣ, ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿದಾಗ 30.00 ಎಮ್‌ಸಿಎಫ್‌ಟಿ ಸಾಮರ್ಥ್ಯ ಹೊಂದಿದೆ.
ಇದೀಗ ಇಲಾಖೆ ಸರ್ಕಾರದ ಆದೇಶದ ಮೇರೆಗೆ ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯ ಆರಂಭಿಸಿದೆ. ಮಂಗಳವಾರ ಕೆರೆ ಒತ್ತುವರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಿ ಕೆರೆ ಸುತ್ತಾ ಹಿಟಾಚಿ ಯಂತ್ರದ ಮೂಲಕ ಟ್ರಂಚ್ ನಿರ್ಮಿಸಿ ಕೆರೆ ಗಡಿ ಗುರುತಿಸುವ ಕಾರ್ಯ ಆರಂಭಿಸಲಾಗಿದೆ.
ಕೃಷಿ ಕಾರ್ಯಕ್ಕೂ ಕೆರೆ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಹೆಗಡೆಹಾಳ್ ಬಳಿ ಶೇ. 10ರಷ್ಟು ಸರ್ವೆ ಕಾರ್ಯ ಬಾಕಿ ಇದ್ದು, ಅದನ್ನು ಪೂರ್ಣಗೊಳಿಸಿದ ನಂತರ ಕೆರೆ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿ ಗಡಿ ನಿಗದಿ ಮಾಡಲಾಗುತ್ತದೆ ಎಂದು ಇಲಾಖೆಯ ಸಹಾಯ ಎಂಜಿನಿಯರ್ ಲಕ್ಷ್ಮಣ್‌ನಾಯ್ಕ ತಿಳಿಸಿದ್ದಾರೆ.
ಆದರೆ, ಇಲಾಖೆ ಸರಿಯಾಗಿ ಸರ್ವೆ ಕಾರ್ಯ ನಡೆಸದೇ ತಾರತಮ್ಯವೆಸಗಿದೆ. ವಾಸ್ತವದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿಲ್ಲ ಎನ್ನುವ ಅಪಸ್ವರ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಅದೇನೆ ಇರಲಿ ಕೆರೆ ಒತ್ತುವರಿ ತೆರವುಗೊಳಿಸುವುದರಿಂದಷ್ಟೇ ಕೆರೆ ಅಭಿವೃದ್ಧಿಯಾದಂತಾಗುವುದಿಲ್ಲ.
ಕೆರೆ ನೀರು ಮನೆಗಳಿಗೆ ನುಗ್ಗದಂತೆ ಇಂದಿರಾ ಕಾಲೊನಿ ಬಳಿ ಟ್ರಂಚ್ ನಿರ್ಮಿಸಿರುವ ಜಾಗದಲ್ಲಿ ತಡೆಗೋಡೆ ನಿರ್ಮಿಸಬೇಕು. ಕೆರೆಯಲ್ಲಿನ ಹೂಳು ತೆಗೆದು, ನೀರು ಸೋರಿಕೆಯಾಗದಂತೆ ಏರಿ ಭದ್ರಪಡಿಸಬೇಕು, ಗುಣಮಟ್ಟದ ಕಾಲುವೆ, ಚೆಕ್‌ಡ್ಯಾಂಗಳ ನಿರ್ಮಾಣದ ಆವಶ್ಯಕತೆ ಇದೆ ಎನ್ನುತ್ತಾರೆ ಸಾರ್ವಜನಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.