ADVERTISEMENT

ಕೇಂದ್ರ ಸರ್ಕಾರದ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 10:40 IST
Last Updated 13 ಅಕ್ಟೋಬರ್ 2011, 10:40 IST

ಹಿರಿಯೂರು: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ತಡೆ ಮಸೂದೆಯನ್ನು ವಿರೋಧಿಸಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ವೇಳೆ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ರಾಘವೇಂದ್ರ, ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂ ವಿರೋಧಿ ಕ್ರಮ ಅನುಸರಿಸಿ ಬಹುಸಂಖ್ಯಾತರನ್ನು ಕುಗ್ಗಿಸುವಂತಹ ಅಪಾಯಕಾರಿ ಮಸೂದೆ ಜಾರಿಗೊಳಿಸಲು ಹೊರಟಿರುವ ಯಪಿಎ ಸರ್ಕಾರ ದೇಶದಲ್ಲಿ ಮತೀಯ ಸಾಮರಸ್ಯಕ್ಕೆ ಕೊಡಲಿಯೇಟು ನೀಡಲಿದೆ ಎಂದು ಆರೋಪಿಸಿದರು.

ಮಸೂದೆ ಜಾರಿಗೆ ಅವಕಾಶ ಮಾಡಿಕೊಟ್ಟಲ್ಲಿ ಹಿಂದೂಗಳ ಜೀವಹಾನಿ, ಮಾನಹಾನಿ ಮಾಡಲು ಸರ್ಕಾರವೇ ಅಲ್ಪಸಂಖ್ಯಾತರಿಗೆ ಪರವಾನಗಿ ಕೊಟ್ಟಂತಾಗುತ್ತದೆ ಈ ಕರಾಳ ಶಾಸನದ ಬಗ್ಗೆ ಎಲ್ಲಾ ಹಿಂದುಗಳು ಎಚ್ಚರಗೊಂಡು ಈಗಲೇ ಪ್ರತಿಭಟಿಸದಿದ್ದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
 

ಬಿಜೆಪಿ ಮುಖಂಡ ಪಿ.ಎಸ್. ತಿಮ್ಮರಾಜ್ ಯಾದವ್ ಮಾತನಾಡಿ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗಾಗಲೇ ಅನೇಕ ಬಾರಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಹೊಸ ವಿಷಯವೇನು ಅಲ್ಲ ಆದರೆ ಈ ಬಾರಿ ಮಸೂದೆ ಜಾರಿಗೆ ತಂದು ದೇಶವನ್ನು ವಿಭಜಿಸಲು ಹೊರಟಿದೆ ಎಂದರು.ಮುಖಂಡ ಟಿ. ಬಸವರಾಜ ನಾಯಕ ಮಾತನಾಡಿದರು.

ಯುವ ಮೋರ್ಚಾ ಅಧ್ಯಕ್ಷ ನಟರಾಜ್, ಪ್ರಧಾನ ಕಾರ್ಯದರ್ಶಿ ಚಿತ್ತಯ್ಯ, ತಾಲ್ಲೂಕು ಅಧ್ಯಕ್ಷ ಜಿ. ಸೋಮಶೇಖರ್, ಸಿ. ಗೋಪಾಲಪ್ಪ, ಬಿ.ಕೆ. ತಿಪ್ಪೇಸ್ವಾಮಿ, ಪರಮೇಶ್ವರಾಚಾರ್, ವಿಜಯಲಕ್ಷ್ಮಿ, ಕೇಶವಮೂರ್ತಿ, ಬೇಲಪ್ಪ, ತಿಮ್ಮಯ್ಯ, ಶಿವಮೂರ್ತಿ, ಭೂತೇಶ್, ಗೌನಹಳ್ಳಿ ಮಹಾಂತೇಶ್, ಸಲೀಂ, ಸಿದ್ದೇಶ್, ಮಹಾಂತೇಶ್, ಚಂದ್ರಶೇಖರ ಪಟೇಲ್, ಮಂಜು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT