ADVERTISEMENT

ಕೊಳೆಗೇರಿ ನಿವಾಸಿಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 3:30 IST
Last Updated 18 ಅಕ್ಟೋಬರ್ 2012, 3:30 IST

ಚಿತ್ರದುರ್ಗ:  ಕೊಳೆಗೇರಿ ನಿವಾಸಿಗಳಿಗೆ ಸರ್ಕಾರದಿಂದ ಮಂಜೂರಾದ ಮನೆಯನ್ನು ಮತ್ತೊಬ್ಬರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಿದರೆ ಮೂಲ ಖಾತೆದಾರರ ಬದಲಿಗೆ ವಾಸವಿರುವವರಿಗೆ ಮಾಲೀಕರಾಗುವ ಹೊಸ ಕಾನೂನನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಶೀಘ್ರ ಅಧಿಕಾರಿಗಳಿಂದ ತಪಾಸಣೆ ನಡೆಯಲಿದೆ ಎಂದು ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಮಾರುತಿರಾವ್ ಪವಾರ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಸಭಾಭವನದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಸ್ಲಂ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸ್ಲಂ ಮೋರ್ಚಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊಳಚೆ ಪ್ರದೇಶಗಳಲ್ಲಿ ನಿರ್ಮಿಸಿರುವ ವಿವಿಧ ಯೋಜನೆಗಳ ಮನೆಗಳ ಮೇಲಿನ ಸಾಲದ ಬಡ್ಡಿಯನ್ನು ಮನ್ನಾಮಾಡಲು ಸರ್ಕಾರ ಆದೇಶ ಹೊರಡಿಸಿದೆ. 2013ರ ಮಾರ್ಚ್ ಒಳಗಾಗಿ ಮನೆ ಸಾಲದ ಅಸಲನ್ನು ತುಂಬಿದರೆ ಬಡ್ಡಿ ಮನ್ನಾ ಆಗಲಿದೆ. ಒಂದು ವೇಳೆ ಸಮಯ ಮೀರಿದರೆ ಪೂರ್ತಿ ಹಣವನ್ನು ತುಂಬಬೇಕಾಗುತ್ತದೆ ಎಂದು ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ 25 ಘೋಷಿತ ಕೊಳೆಗೇರಿ ಪ್ರದೇಶಗಳಿದ್ದು, 12 ಅಘೋಷಿತ ಕೊಳೆಗೇರಿ ಪ್ರದೇಶಗಳಿವೆ. ಇಲ್ಲಿ ವಾಸಿಸುವ ಜನತೆಗೆ ಹಕ್ಕುಪತ್ರ ನೀಡಿದರೆ ಮುಂದೆ ಅವರಿಗೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಪವಾರ್ ತಿಳಿಸಿದರು.

ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಕೊಳೆಗೇರಿ ನಿವಾಸಿಗಳ ಸಮಾವೇಶ ನಡೆಸಲಾಗುವುದು. ನಗರದ ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ ನಿರ್ಮಲ ಜ್ಯೋತಿ ಯೋಜನೆ ಅಡಿ ್ಙ 17.60 ಕೋಟಿ ಬಿಡುಗಡೆ ಮಾಡಿಸಿದ್ದೆ. ಈ ಅನುದಾನದ ಅಡಿಯಲ್ಲಿ ಕೈಗೊಂಡ ಕಾಮಗಾರಿಯ ಬಗ್ಗೆ ತನಿಖೆಯಾಗಬೇಕು. ತಾವು ಚುನಾವಣೆಯಲ್ಲಿ ಸೋತ ಮೇಲೆ ಹೊಸದಾಗಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ಅವರ ಬೆಂಬಲಿಗರಿಗೆ ಈ ಕಾಮಗಾರಿಗಳ ಗುತ್ತಿಗೆ ಕೊಡಿಸಿದ್ದಾರೆ ಎನ್ನುವ ಮಾತಿದೆ ಎಂದು ಆರೋಪಿಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೂ ಚುನಾಯಿತ ಪ್ರತಿನಿಧಿಗಳು ಗಮನಹರಿಸಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್, ಜಿಲ್ಲಾ ಸ್ಲಂ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಗೌರಣ್ಣ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಮುಜೀಬುಲ್ಲಾ ಅಹಮದ್ ಬಾಬು, ಸಿಂಧ್ಯಾ, ತಿಪ್ಪೇಸ್ವಾಮಿ, ಮಹಮದ್ ಸಿರಾಜುದ್ದಿನ್ ಹನುಮಂತಪ್ಪ, ಶಿವಣ್ಣಾಚಾರ್, ಪ್ರಧಾನ ಕಾರ್ಯದರ್ಶಿ ಜೆ. ಮೋಹನ್, ಹನುಮಂತರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.