ಹೊಸದುರ್ಗ: ಗಣಿಗಾರಿಕೆ, ಅರಣ್ಯ ನಾಶದಿಂದಾಗಿ ತಾಲ್ಲೂಕಿನ ನೈಸರ್ಗಿಕ ಸಂಪತ್ತು ಅವಸಾನದತ್ತ ಸಾಗುತ್ತಿದೆ.
ಡಾ.ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಹೊಸದುರ್ಗ ಸಂಪತ್ಭರಿತ ಪ್ರದೇಶವಾಗಿದೆ. ಇಲ್ಲಿ ಹೇರಳವಾಗಿ ದೊರೆಯುವ ಕಬ್ಬಿಣ, ಮ್ಯಾಂಗನೀಸ್, ಡೋಲಮೈಟ್, ಸುಣ್ಣದಕಲ್ಲು ಇತ್ಯಾದಿಗಳ ಖನಿಜ ಸಂಪತ್ತಿನ ಗಣಿಗಾರಿಕೆಯಿಂದಾಗಿ ಗುಡ್ಡ ಕರಗುತ್ತಿದೆ. ಮರಳು ಗಣಿಗಾರಿಕೆಯಿಂದಾಗಿ ವೇದಾವತಿ ಒಡಲು ಒರಿದಾಗುತ್ತಿದೆ. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಪ್ರಕೃತಿಯ ವೆುೀಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಯಾರೂ ಮುಂದಾಗುತ್ತಿಲ್ಲವಲ್ಲ ಎಂದು ಇಲ್ಲಿನ ನಿವಾಸಿಗಳು ಆತಂಕ ಪಡುವಂತಾಗಿದೆ.
ದಿನದಿನಕ್ಕೂ ಬೆಳೆಯುತ್ತಿರುವ ಹೊಸದುರ್ಗ ಪಟ್ಟಣ ಕಸದ ತೊಟ್ಟಿಯಂತಾಗಿದೆ. ಎಲ್ಲೆಂದರಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ಸೂಕ್ತ ರೀತಿಯಲ್ಲಿ ವಿಲೇವಾರಿಯಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿಯೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಬಿದ್ದಿವೆ. ಇವುಗಳಿಂದಾಗುವ ತೊಂದರೆಯ ಬಗ್ಗೆ ಜನಸಾಮಾನ್ಯರಿಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಹೀಗಾದರೆ ಭೂತಾಯಿಯ ಉಳಿವು ಅಸಾಧ್ಯ ಎನ್ನುತ್ತಾರೆ ತಾಲ್ಲೂಕು ಸಿಪಿಐ ಕಾರ್ಯದರ್ಶಿ ಕೆ.ಎನ್. ರಮೇಶ್.
ಮತ್ತೋಡು, ಶ್ರೀರಾಂಪುರ ಹಾಗೂ ಮಾಡದಕರೆ ಹೋಬಳಿ ವ್ಯಾಪ್ತಿಗಳಲ್ಲಿರುವ ಗಣಿ ಸಂಸ್ಥೆಗಳು ಭೂತಾಯಿ ಒಡಲನ್ನು ಬಗೆದು ಹಣ ಮಾಡಿಕೊಳ್ಳುತ್ತಿವೆಯೇ ಹೊರತು, ನಾಶವಾಗುತ್ತಿರುವ ಪ್ರಕೃತಿಯನ್ನು ರಕ್ಷಿಸಲು ನಿಯಮಾವಳಿಯಂತೆ ಯಾವುದೇ ಕೆಲಸ ಮಾಡುತ್ತಿಲ್ಲ. ಕೆಲವು ಗಣಿ ಸಂಸ್ಥೆಗಳು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಗಿಡ ಮರಗಳನ್ನು ನೆಲಕ್ಕುರುಳಿಸುತ್ತಿವೆ.
ತಾಲ್ಲೂಕಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಸಿಗಳನ್ನು ನೆಟ್ಟು ಬೆಳಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಜಲಾನಯನ ಯೋಜನೆಗಳ ಅಡಿಯಲ್ಲಿಯೂ ಸಸಿಗಳನ್ನು ನೆಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಯೋಜನೆಯಡಿ ಸಸಿಯನ್ನು ನೆಟ್ಟು ಅಪಾರ ಮೊತ್ತದ ಹಣಪಡೆಯಲಾಗಿದೆಯೇ ಹೊರತು ಸಸಿಗಳನ್ನು ಪೋಷಿಸಿರಕ್ಷಿಸುವಲ್ಲಿ ಯಾವುದೇ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ವಿದ್ಯಾರ್ಥಿ ಸಂಘಟನೆಯ ಜಗದೀಶ್ ಬೇಸರ ವ್ಯಕ್ತಪಡಿಸುತ್ತಾರೆ.
ತಾಲ್ಲೂಕಿನ ಜೀವನಾಡಿ ವೇದಾವತಿ ನದಿ. ಇಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗಿದೆ. ಇದರಿಂದಾಗಿ ನದಿ ದಂಡೆ ಕುಸಿದು ಹೋಗುತ್ತಿದೆ. ಇಷ್ಟೆಲ್ಲಾ ಅನಾಹುತ ನಡೆಯುತ್ತಿದ್ದರೂ ಅದನ್ನು ತಡೆಯುವ ನಿಟ್ಟಿನಲ್ಲಿ ಯಾರೂ ಮುಂದಾಗುತ್ತಿಲ್ಲ. ದುರಾಸೆಗೆ ಬಿದ್ದ ಸ್ವಾರ್ಥಿಗಳು ಭವಿಷ್ಯದ ಬಗ್ಗೆ ಚಿಂತಿಸದೆ ಹಣ ಮಾಡುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ.
ಆಪತ್ತಿನಲ್ಲಿರುವ ಭೂರಮೆಯ ರಕ್ಷಣೆಗೆ ವರ್ಷದಲ್ಲೊಂದು ದಿನ ವಿಶ್ವ ಭೂದಿನ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಶುಕ್ರವಾರ ಭೂದಿನ ಆಚರಣೆ ಇದ್ದರೂ, ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಘ ಸಂಸ್ಥೆಗಳು ಆಶ್ರಯದಲ್ಲಿ ಹೆಸರಿಗಾದರೂ ಒಂದು ಕಾರ್ಯಕ್ರಮ ನಡೆಯಲಿಲ್ಲ. ಎಲ್ಲರಲ್ಲೂ ಸ್ವಾರ್ಥ ತುಂಬಿರುವಾಗ ಭೂತಾಯಿಯ ರಕ್ಷಣೇ ಹೇಗೆ ಸಾಧ್ಯ ಎನ್ನುವುದು ಯಕ್ಷ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.