ADVERTISEMENT

ಗುರು-ಹಿರಿಯರ ನಿರ್ಲಕ್ಷ್ಯ ಸಲ್ಲ: ಎಚ್ಚೆಸ್ವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 8:15 IST
Last Updated 12 ಜನವರಿ 2012, 8:15 IST

ಹೊಳಲ್ಕೆರೆ: ಇಂದಿನ ಮಕ್ಕಳು ಗುರು-ಹಿರಿಯರನ್ನು ನಿರ್ಲಕ್ಷ್ಯಿಸುವ ಕೆಟ್ಟ ಪ್ರವೃತ್ತಿ ಬೆಳೆಸಿಕೊಂಡಿದ್ದು, ವೃದ್ಧರ ಬದುಕು ಶೋಚನೀಯವಾಗಿದೆ ಎಂದು ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಬುಧವಾರ ನಡೆದ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೃದ್ಧ ಜೀವಗಳು, ಭಿಕ್ಷೆ ಬೇಡುವ, ಅನಾಥಾಶ್ರಮಗಳನ್ನು ಸೇರುವ ದುಸ್ಥಿತಿ ಬಂದಿದೆ. ಆದ್ದರಿಂದ, ಮಕ್ಕಳಿಗೆ ಸಂಸ್ಕಾರ ಕಲಿಸುವ ಶಿಕ್ಷಣ ಕೊಡಬೇಕು. ನಾನು ರಚಿಸಿದ `ಮುದಿದೊರೆ ಮತ್ತು ಮೂವರು ಮಕ್ಕಳು~ ನಾಟಕ ಸಮಾಜದ ವಿಘಟನೆಯ ಕುರಿತು ಹೇಳುತ್ತದೆ. ಇದರೊಂದಿಗೆ ಮಕ್ಕಳು ನಡೆದುಕೊಳ್ಳಬೇಕಾದ ರೀತಿ, ಅವರ ಜವಾಬ್ದಾರಿಗಳ ಕುರಿತು ಬೆಳೆಕು ಚೆಲ್ಲುತ್ತದೆ ಎಂದರು.

ಮಲ್ಲಾಡಿಹಳ್ಳಿಗೂ ನನಗೂ ಅವಿನಾಭಾವ ಸಂಬಂಧ ಇದೆ. 1974 ರಲ್ಲಿ ನಾನು ಈ ಆಶ್ರಮದ ಪ್ರೌಢಶಾಲೆ ಯಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ನನ್ನ ಸಾಹಿತ್ಯದ ತುಡಿತಕ್ಕೆ ನೀರೆರೆದು ಪೋಷಿಸಿದ ಪುಣ್ಯಭೂಮಿ ಇದು. ನನ್ನ ಮೊದಲ ಕೃತಿ ರಚನೆಗೊಂಡಿದ್ದು ಇದೇ ನೆಲದಲ್ಲಿ. ರಾಘವೇಂದ್ರ ಸ್ವಾಮೀಜಿ ಮತ್ತು ಸೂರ್‌ದಾಸ್ ಜೀ ಸ್ವಾಮೀಜಿ ಮಾದರಿ ಗುರುಶಿಷ್ಯರು. ರಾಘವೇಂದ್ರ ಶ್ರೀ ಸಾತ್ವಿಕ ಚಿಂತನೆಗೆ ಹೆಸರಾದರೆ, ಸೂರ್‌ದಾಸ್‌ಜೀ ಅವರು ಗುರುಗಳಿಗೆ ಬೆನ್ನೆಲುಬಾಗಿ ನಿಂತು ಆಶ್ರಮ ಮುನ್ನಡೆಸುತಿದ್ದರು ಎಂದು ನುಡಿದರು.

ವಿಜಯನಗರ ಕೃಷ್ಣದೇವರಾಯ ವಿವಿ ಪ್ರಾಧ್ಯಾಪಕ, ಸಾಹಿತಿ ಪ್ರೊ.ವೆಂಕಟಗಿರಿ ದಳವಾಯಿ ಮಾತನಾಡಿ, ರಾಘವೇಂಧ್ರ ಸ್ವಾಮೀಜಿ ಹರಿದ ತಳದ ಜೋಳಿಗೆ ಹಿಡಿದು ಭಿಕ್ಷೆ ಬೇಡಿದರೂ, ಅನಾಥ ಸೇವಾಶ್ರಮಕ್ಕೆ ಭದ್ರ ಬುನಾದಿ ಹಾಕಿದರು. ಮಲ್ಲಾಡಿಹಳ್ಳಿಯಂತಹ ಕುಗ್ರಾಮವನ್ನು ಆಯುರ್ವೇದ, ಶಿಕ್ಷಣ, ಯೋಗ ಕೇಂದ್ರವನ್ನಾಗಿ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದರು ಎಂದು ಶ್ಲಾಘಿಸಿದರು.

ನೇತೃತ್ವ ವಹಿಸಿದ್ದ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ರಾಘವೇಂದ್ರ ಸ್ವಾಮೀಜಿ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ಜಾತ್ಯತೀತ ಆಶ್ರಮ ಕಟ್ಟಿದರು. ಅದು ಇಂದಿಗೂ ಮುಂದುವರೆಯುತ್ತಿರುವುದು ಎಲ್ಲರಿಗೂ ಮಾದರಿ ಎಂದರು.

ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ರಚನೆಯ ಷೇಕ್ಸ್‌ಪಿಯರ್‌ನ ಕಿಂಗ್‌ಲಿಯರ್ ನಾಟಕದ ರೂಪಾಂತರ ನಾಟಕ `ಮುದಿದೊರೆ ಮತ್ತು ಮೂವರು ಮಕ್ಕಳು~ ನಾಟಕ ಪ್ರದರ್ಶನಗೊಂಡಿತು. ಯೋಗ ತರಬೇತುದಾರ ಸಂತೋಷ್‌ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗನಮನ ಸಲ್ಲಿಸಿದರು.

ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ, ರಾಜಕೀಯ ಮುಖಂಡ ಮಹಿಮ ಪಟೇಲ್, ಪ್ರಶಾಂತ್, ಅಮೃತ ಆರ್ಗ್ಯಾನಿಕ್ಸ್‌ನ ಕೆ. ನಾಗರಾಜ್, ರಂಗಸ್ವಾಮಿ, ಪತ್ರಕರ್ತ ಉಜ್ಜಿನಪ್ಪ, ಸಹಾಯಕ ಆಡಳಿತಾಧಿಕಾರಿಗಳಾದ ಕೆ.ಡಿ. ಬಡಿಗೇರ, ಎಲ್.ಎಸ್ ಶಿವರಾಮಯ್ಯ, ಡಾ.ಪಂಪಣ್ಣ, ಶೇಷಪ್ಪಾಚಾರ್, ಡಾ.ಎನ್.ಬಿ. ಸಜ್ಜನ್, ಶಶಿಕಲಾ, ರಂಗನಾಥ್, ಲೀಲಾವತಿ  ಇದ್ದರು. ಡಿ. ಸತೀಶ್ ಸ್ವಾಗತಿಸಿದರು. ವನಜಾಕ್ಷಮ್ಮ  ಕಾರ್ಯಕ್ರಮ ನಿರೂಪಿಸಿದರು. ಟಿ. ಲೋಕೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.