ADVERTISEMENT

ಚರಂಡಿಯಲ್ಲಿ ತುಂಬಿ ತುಳುಕುತ್ತಿದೆ ತ್ಯಾಜ್ಯ

ಮಳೆಗಾಲಕ್ಕೂ ಮುನ್ನ ಸಜ್ಜಾಗುವಂತೆ ಒತ್ತಾಯ l ಸ್ವಚ್ಛತೆಯ ಹೊಣೆ ಪ್ರತಿಯೊಬ್ಬರ ಜವಾಬ್ದಾರಿ

ಕೆ.ಎಸ್.ಪ್ರಣವಕುಮಾರ್
Published 10 ಜೂನ್ 2018, 13:10 IST
Last Updated 10 ಜೂನ್ 2018, 13:10 IST

ಚಿತ್ರದುರ್ಗ: ರಭಸವಾಗಿ ಮಳೆಯಾದರೆ ಕೆಲ ಬಡಾವಣೆಗಳ ಚರಂಡಿಗಳಲ್ಲಿ ನೀರಿನ ಜತೆ ತ್ಯಾಜ್ಯದ ರಾಶಿ ಕಣ್ಣಿಗೆ ರಾಚುತ್ತದೆ. ಸ್ವಚ್ಛತೆ ನಿರ್ವಹಣೆಯಲ್ಲಿ ಪ್ರತಿ ಬಾರಿಯೂ ನಗರಸಭೆಯನ್ನೇ ದೂಷಿಸುವ ಬದಲು ನಮ್ಮ ಪಾತ್ರವೇನು ಎಂಬುದರ ಕುರಿತು ನಾಗರಿಕರು ಮುಂಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದೆ.

ಪ್ಲಾಸ್ಟಿಕ್ ಪರಿಸರದ ಮಹಾಶತ್ರು. ಅದಕ್ಕಾಗಿಯೇ ಕೆಲವು ಪ್ಲಾಸ್ಟಿಕ್‌ ವಸ್ತುಗಳನ್ನು ಸರ್ಕಾರ ನಿಷೇಧಿಸಿತ್ತು. ಆದರೂ ಪ್ಲಾಸ್ಟಿಕ್‌ ಬ್ಯಾಗ್‌, ಕ್ಯಾರಿಯರ್‌ ಬ್ಯಾಗ್‌, ಪೋಸ್ಟರ್‌, ಟೇಬಲ್‌ ಕವರ್‌, ಪ್ಲಾಸ್ಟಿಕ್‌ ಲೋಟ, ಪ್ಲಾಸ್ಟಿಕ್‌ ಥರ್ಮಾಕೋಲ್‌ ಉಪಯೋಗಿಸಿದ ನಂತರ ಚರಂಡಿ ಸೇರುತ್ತಿವೆ. ಇದಕ್ಕೆ ಪರಿಸರದ ಕುರಿತು ಕಾಳಜಿ ಇಲ್ಲದ ಕೆಲ ನಾಗರಿಕರೇ ಕಾರಣರಾಗಿದ್ದಾರೆ.

ನಿಷೇಧ ಹೇರಿದ ಬಳಿಕವೂ ಅದರ ಬಳಕೆಯ ಪ್ರಮಾಣ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕಡಿಮೆಯಾಗಿಲ್ಲ. ನಗರಸಭೆ ಅಧಿಕಾರಿಗಳು ಆಗಿಂದಾಗ್ಗೆ ದಾಳಿ ನಡೆಸಿ, ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಕೆಲ ಮಾರಾಟಗಾರರಿಗೆ ದಂಡ ವಿಧಿಸಿದ್ದೂ ಉಂಟು. ಆದರೂ ಮಾರಾಟ ಮುಂದುವರೆಯುತ್ತಿದ್ದು, ರಸ್ತೆ ಹಾಗೂ ಚರಂಡಿ ಸೇರುವ ತ್ಯಾಜ್ಯ ಮುಂದೊಂದು ದಿನ ಅವರ ಮನೆ ಅಂಗಳ ಸೇರಿದರೂ ಅಚ್ಚರಿಪಡಬೇಕಿಲ್ಲ.
ಸಾಂಕ್ರಾಮಿಕ ರೋಗದ ಭೀತಿ:

ADVERTISEMENT

ನಗರ ವ್ಯಾಪ್ತಿಯ ಹಲವು ಬಡಾವಣೆಗಳ ಚರಂಡಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ತ್ಯಾಜ್ಯದ ರಾಶಿಯೇ ಬಿದ್ದಿರುತ್ತದೆ. ದೊಡ್ಡ ಚರಂಡಿಗೆ ಎಸೆದರೆ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ ಎಂದು ಕೆಲವರು ನಿತ್ಯ ಹಾಕುತ್ತಾರೆ. ಆದರೆ, ಜೋರಾಗಿ ಮಳೆ ಸುರಿದರೆ ನೀರಿನ ಜೊತೆ ಆ ತ್ಯಾಜ್ಯ ಸಣ್ಣ ಚರಂಡಿಗಳಿಗೂ ನುಗ್ಗುತ್ತದೆ. ತುಂಬಿದ ನಂತರ ರಸ್ತೆಗಳ ಮೇಲೆ ಹರಿದು ಪರಿಸರವನ್ನು ಹಾಳು ಮಾಡುತ್ತದೆ. ಹೀಗಾದಾಗ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತದೆ ಎಂದು ಕೊಳೆಗೇರಿ ನಿವಾಸಿಗಳಾದ ಓಬಣ್ಣ, ರಾಜು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘ರಸ್ತೆ ಹಾಗೂ ಚರಂಡಿ ಎಲ್ಲೆಂದರಲ್ಲಿ ಕಸ, ಅನುಪಯುಕ್ತ ಬಟ್ಟೆ, ನೀರಿನ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಇತರೆ ವಸ್ತು ಎಸೆಯುವುದನ್ನು ಕೆಲವರು ಬಿಟ್ಟಿಲ್ಲ. ಅದನ್ನು ಎಲ್ಲಿಯವರೆಗೂ ಬಿಡುವುದಿಲ್ಲವೋ ಅಲ್ಲಿಯವರೆಗೂ ಸಮಸ್ಯೆ ತಪ್ಪಿದ್ದಲ್ಲ. ನಾಯಿ ಹಾಗೂ ಹಂದಿಗಳು ಚರಂಡಿಯಿಂದ ಬರುವ ಕಸದ ರಾಶಿಯನ್ನು ಚೆಲ್ಲಾಪಿಲ್ಲಿಗೊಳಿಸಿ ವಾತಾವರಣ­ವನ್ನು ಮತ್ತಷ್ಟು ಗಲೀಜು ಮಾಡು­ತ್ತವೆ’ ಎನ್ನುತ್ತಾರೆ ವಿವಿಧ ಬಡಾವಣೆಗಳ ನಿವಾಸಿಗಳಾದ ಮಧು, ರಮೇಶ್, ಸತೀಶ್.

ಕಸ ವಿಲೇವಾರಿ ನಡುವೆಯೂ ಸಮಸ್ಯೆ: ಚರಂಡಿಗಳಲ್ಲಿ ತುಂಬಿದ ಕಸವನ್ನು ಆಗಿಂದಾಗ್ಗೆ ನಾವು ವಿಲೇವಾರಿ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಶೇ75ರಷ್ಟು ಮಂದಿ ಮನೆಯ ಕಸವನ್ನು ನಗರಸಭೆ ವಾಹನದಲ್ಲೇ ಸುರಿಯುತ್ತಾರೆ. ಆದರೆ, ಉಳಿದ ಶೇ 25 ರಷ್ಟು ಮಂದಿ ಎಲ್ಲಿ ಹಾಕುತ್ತಾರೆ ಎಂಬುದನ್ನು ಹೇಳುವ ಅಗತ್ಯವಿಲ್ಲ. ‘ಕೆಲ ಅಂಗಡಿ ಮಾಲೀಕರು ಮುಖ್ಯ ರಸ್ತೆಗಳ ಬದಿಯಲ್ಲಿ ಕಸ ಎಸೆಯುತ್ತಾರೆ. ಪೌರ ಕಾರ್ಮಿಕರು ಒಂದೆರಡು ದಿನ ಸ್ವಚ್ಛತೆ ಕೈಗೊಳ್ಳದೆ ಇದ್ದರೆ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ದುರ್ವಾಸನೆ ಪರಿಸರದಲ್ಲಿದ್ದಾಗ ಮಾತ್ರ ಸಮಸ್ಯೆಯ ನೈಜತೆ ಪ್ರತಿಯೊಬ್ಬರೂ ಅರಿಯಲು ಸಾಧ್ಯ’ ಎನ್ನುತ್ತಾರೆ ಕೆಲ ಪೌರ ಕಾರ್ಮಿಕರು.

ಸ್ವಚ್ಛ ಪರಿಸರದ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಆಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ಕೆಲ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

‘ಪ್ಲಾಸ್ಟಿಕ್ ಎಸೆದರೆ ಕ್ರಮ’

ಕೋಟೆನಾಡಿನ ಪರಿಸರದ ಹಿತದೃಷ್ಟಿಯಿಂದ ಚರಂಡಿಗಳಲ್ಲಿ ಕೆಲ ಪ್ಲಾಸ್ಟಿಕ್, ಅನುಪಯುಕ್ತ ವಸ್ತುಗಳನ್ನು ಯಾರೂ ಕೂಡ ಎಸೆಯಬಾರದು. ಒಂದು ವೇಳೆ ಯಾರಾದರೂ ಎಸೆದ ವಿಚಾರ ನಗರಸಭೆಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಗಮನಕ್ಕೆ ಬಂದಲ್ಲಿ ಎಸೆದವರಿಗೆ ಇಂತಿಷ್ಟು ದಂಡ ವಿಧಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ ತಿಳಿಸಿದ್ದಾರೆ.

ಸಂತೇಹೊಂಡ ಸ್ವಚ್ಛತೆ ಕೈಗೊಂಡ ಸಂದರ್ಭದಲ್ಲಿ ಚೀಲಗಟ್ಟಲೇ ತ್ಯಾಜ್ಯವನ್ನು ಹೊಂಡಕ್ಕೆ ಸುರಿದ ಅಂಗಡಿಯೊಂದಕ್ಕೆ ಅತಿ ಹೆಚ್ಚು ಅಂದರೆ, ₹ 25 ಸಾವಿರ ದಂಡ ಸ್ಥಳದಲ್ಲೇ ವಿಧಿಸಿದ್ದೆ ಎನ್ನುತ್ತಾರೆ ಅವರು.

ಮುಂದಿನ ದಿನಗಳಲ್ಲಿ ದೊಡ್ಡ ಮಳೆಗಳಾಗಿ ಅನಾಹುತಗಳಾದರೆ ಅದನ್ನು ತಪ್ಪಿಸಲಿಕ್ಕಾಗಿ ನಿಯಮಾನುಸಾರ ಪ್ಲಾಸ್ಟಿಕ್ ಎಸೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಪೌರಾಯುಕ್ತ ಎಂ.ಕೆ.ನಲವಡಿ.

ಯಾವ ಬಡಾವಣೆಗಳಲ್ಲಿ ಸಮಸ್ಯೆ:

ನೆಹರೂ ನಗರlಭೋವಿ ಕಾಲೊನಿlರಂಗಯ್ಯನ ಬಾಗಿಲು, ಅಜಾದ್ ನಗರlಚನ್ನಕ್ಕಿ ಗುಂಡಿlಪ್ರಶಾಂತನಗರ, ಬಿ.ಡಿ.ರಸ್ತೆlಕಾಮನಬಾವಿ ಬಡಾವಣೆ, ಕೆಳಗೋಟೆlಹೊಳಲ್ಕೆರೆ ರಸ್ತೆlಗೋಪಾಲಪುರ ರಸ್ತೆಗಳಲ್ಲಿ ಸಮಸ್ಯೆ ಇದೆ.

ನಗರದ ವಿವಿಧೆಡೆ ಈಗಾಗಲೇ ಮಾಡಿರುವಂತೆ ಚರಂಡಿಯೊಳಗೆ ನೀರು ಸರಾಗವಾಗಿ ಹರಿಯುವಂಥ ಯೋಜನೆಯನ್ನು ಎಲ್ಲೆಡೆಗೆ ವಿಸ್ತರಿಸಬೇಕು.
ಉಮೇಶ್, ಪ್ರಶಾಂತ್ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.