ADVERTISEMENT

ಚಿಕ್ಕಜಾಜೂರು: ರೇಷ್ಮೆ ಇಲಾಖೆಗೆ ಕಳ್ಳರ ಕಾಟ

ಕಿಟಕಿ, ಬಾಗಿಲು, ಕಬ್ಬಿಣ, ಬೆಲೆಬಾಳುವ ಮರಗಳು ಮಾಯ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 7:52 IST
Last Updated 12 ಡಿಸೆಂಬರ್ 2012, 7:52 IST

ಚಿಕ್ಕಜಾಜೂರು: ರೇಷ್ಮೆ ಇಲಾಖೆಗೆ ಸೇರಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಇಂದು ಯಾರಿಗೂ ಬೇಡವಾಗಿ ಕಳ್ಳಕಾಕರ ಪಾಲಾಗುತ್ತಿದೆ. ಸದ್ಯ ಇದು ಅವ್ಯವಹಾರಗಳ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ.

ಸಮೀಪದ ಕೋಟೆಹಾಳು ಗ್ರಾಮದಲ್ಲಿ ಸರ್ಕಾರ ರೇಷ್ಮೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಎಂದು 1979ರಲ್ಲಿ ಗ್ರಾಮದ ಸರ್ವೇ ನಂ.: 48ರಲ್ಲಿ 10 ಎಕರೆ ಜಮೀನನ್ನು ನೀಡಿತ್ತು. ಈ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ರೇಷ್ಮೆ ಹುಳು ಚಾಕಿಗಾಗಿ ಹಾಗೂ ಬಲಿತ ಹುಳುಗಳ ಸಾಕಾಣಿಕೆಗಾಗಿ ಎರಡು ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಈಗ ಈ ಕಟ್ಟಡಗಳೆಲ್ಲ ಶಿಥಿಲಾವಸ್ಥೆ ಹೊಂದಿವೆ.

ಒಂದು ಕಟ್ಟಡದಲ್ಲಿರುವ ಕಿಟಕಿ, ಬಾಗಿಲುಗಳು ಹಾಗೂ ಕಟ್ಟಡಕ್ಕೆ ಬಳಸಿದ್ದ ಕಬ್ಬಿಣ ಮಾಯವಾಗಿದೆ. ಇನ್ನೊಂದು ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿ ಬಿದ್ದಿದೆ. ಕಟ್ಟಡದ ಕಂಬಗಳು, ಮೇಲ್ಛಾವಣಿ, ಕಿಟಕಿ, ಬಾಗಿಲುಗಳಿಗೆ ಬಳಸಲಾಗಿದ್ದ ಕಬ್ಬಿಣ ಇವತ್ತಿಗೂ ದಿನನಿತ್ಯ ಕೆಲವರು ತೆಗೆದು ಯಾರಿಗೂ ಗೊತ್ತಿಲ್ಲದಂತೆ ಮಾರಾಟ ಮಾಡುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ.

ರೇಷ್ಮೆ ಇಲಾಖೆಯ ಸಹಾಯಕರು ಚಿಕ್ಕಜಾಜೂರು, ಕೋಟೆಹಾಳು, ಕೊಡಗವಳ್ಳಿ, ಗುಂಜಿಗನೂರು, ಬಾಣಗೆರೆ, ಪಾಡಿಗಟ್ಟೆ, ಅಪ್ಪರಸನಹಳ್ಳಿ ಮೊದಲಾದ ಗ್ರಾಮಗಳಲ್ಲಿ ರೇಷ್ಮೆ ಬೆಳೆಗೆ ಮಾರ್ಗದರ್ಶನ ನೀಡುತ್ತಾ, ಉತ್ತಮ ಬೆಳೆ ಬೆಳೆಯಲು ಕಾರಣರಾಗಿದ್ದರು. ರೈತರು ಇವರ ಸಹಾಯದಿಂದ ಸಾಕಷ್ಟು ಬೆಳೆಯನ್ನೂ ಬೆಳೆಯುತ್ತಿದ್ದರು.

ಇಲಾಖೆಯು ಕೇಂದ್ರದ ಸುಮಾರು 5 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಲು ಹಾಗೂ ಅಲ್ಲಿನ ಕಾರ್ಮಿಕರ ಅನುಕೂಲಕ್ಕಾಗಿ ಎರಡು ಕೊಳವೆಬಾವಿಗಳನ್ನು ತೋಡಿಸಿತ್ತು. ಆದರೆ, ಅಂತರ್ಜಲ ಕುಸಿತದಿಂದಾಗಿ ನೀರು ಬರಿದಾಗಿ ಬೆಳೆದು ನಿಂತಿದ್ದ, ಹಿಪ್ಪುನೇರಳೆ ಸೊಪ್ಪು ಒಣಗುತ್ತಾ ಬಂದಿತು. ನಿರ್ವಹಣೆ ಕಷ್ಟವಾಗಿ ಇಲಾಖೆ ಯಾವುದೇ ಹೆಚ್ಚಿನ ಕ್ರಮ ಕೈಗೊಳ್ಳದೆಯೋ? ಅಥವಾ ಸರಿಯಾದ ವ್ಯವಸ್ಥೆ ಇಲ್ಲದೆಯೋ? ಕಳೆದ ಏಳೆಂಟು ವರ್ಷಗಳ ಹಿಂದೆ ಇಲ್ಲಿನ ರೇಷ್ಮೆ ಕೃಷಿ ಕ್ಷೇತ್ರವನ್ನು ಮುಚ್ಚಿತು.

ಅಲ್ಲಿನ ದಿನಗೂಲಿ ನೌಕರರು ಸರ್ಕಾರದ ಅನುಕಂಪದಿಂದ ಕಾಯಂ ಉದ್ಯೋಗಿಗಳಾಗಿ ವಿವಿಧ ಇಲಾಖೆಗಳಿಗೆ ಹೋದರು. ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಚಿತ್ರದುರ್ಗದ ಕೇಂದ್ರ ಕಚೇರಿಗೆ ಸ್ಥಳಾಂತರಗೊಂಡವು. ಆದರೆ, ಇಲ್ಲಿನ ಕೇಂದ್ರದ ಕಟ್ಟಡಗಳು, ಕೊಳವೆ ಬಾವಿಗಳು, ಸಾಕಿ ಬೆಳೆಸಿದ ನೂರಾರು ವಿವಿಧ ಜಾತಿಯ ಗಿಡ ಮರಗಳು ಮಾತ್ರ ಅನಾಥವಾಗಿ ಯಾರಿಗೂ ಬೇಡವಾಯಿತು. ಇಲ್ಲಿಗೆ ದನಗಳನ್ನು ಮೇಯಿಸಲು ಬರುವ ಯುವಕರು ಜೂಜಾಡುವುದು ಕಂಡು ಬರುತ್ತಿದೆ.

ಕಳವು: ಅನಾಥವಾಗಿ ಬಿದ್ದಿರುವ ಕಟ್ಟಡದ ಕಬ್ಬಿಣ ಹಾಗೂ ಇನ್ನಿತರ ವಸ್ತುಗಳನ್ನು ಗ್ರಾಮದ ಕೆಲವರು ದಿನ ನಿತ್ಯ ಕದ್ದು ಮಾರಾಟ ಮಾಡುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.ತಕ್ಷಣವೇ ಪೊಲೀಸರು ಸೂಕ್ತ ಭದ್ರತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನವಿ: ರೇಷ್ಮೆ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಅನಾಥವಾಗಿ ಬಿದ್ದಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಈ ಆಸ್ತಿಯ ಜಮೀನಿನಲ್ಲಿ ಡಿಪ್ಲೊಮೊ ಕಾಲೇಜು ಅಥವಾ ವಸತಿಯುತ ಶಾಲಾ-ಕಾಲೇಜು ನಿರ್ಮಿಸಿ ಈ ಭಾಗದ ಸಹಸ್ರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಕೆ. ದಿನೇಶ್, ಷಣ್ಮುಖಪ್ಪ, ಪ್ರಭುದೇವ, ಮಾದೇಶ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.