ADVERTISEMENT

ಚುನಾವಣಾ ವೆಚ್ಚದ ಮೇಲೆ ಕಟ್ಟುನಿಟ್ಟಿನ ನಿಗಾ

ಸಮರ್ಪಕ ಲೆಕ್ಕಪತ್ರ ನಿರ್ವಹಿಸಲು ಅಭ್ಯರ್ಥಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 12:53 IST
Last Updated 20 ಏಪ್ರಿಲ್ 2013, 12:53 IST

ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಕೈಗೊಳ್ಳುವ ವೆಚ್ಚದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.

ಅಭ್ಯರ್ಥಿಗಳು ಸಮರ್ಪಕವಾಗಿ ಲೆಕ್ಕಪತ್ರ ನಿರ್ವಹಿಸದಿದ್ದರೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದರೆ ಶಾಸಕರಾಗಿ ಆಯ್ಕೆಯಾಗಿದ್ದರೂ ಅನರ್ಹಗೊಳ್ಳುವ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಚುನಾವಣಾ ವೆಚ್ಚದ ಮೇಲೆ ನಿಗಾವಹಿಸಲು ಪ್ರತಿಯೊಂದು ಜಿಲ್ಲೆಯಲ್ಲಿ ವೀಕ್ಷಕರನ್ನು ನೇಮಿಸಲಾಗಿದೆ. ಚಿತ್ರದುರ್ಗ ಜಿಲ್ಲೆಗೆ ಮೂವರನ್ನು ನೇಮಿಸಲಾಗಿದೆ. ತಮಿಳುನಾಡು, ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾ ವೆಚ್ಚದ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಅಲ್ಲಿನ ಅನುಭವದ ಆಧಾರದ ಮೇಲೆ ಕರ್ನಾಟಕದಲ್ಲೂ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣಾ ಆಯೋಗ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ಸಂಬಂಧಿಸಿದಂತೆ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೈಗೊಳ್ಳುವ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳನ್ನು ಸಹ ವಿಡಿಯೋ ಚಿತ್ರೀಕರಣವನ್ನು ಕೈಗೊಳ್ಳಲಾಗುತ್ತಿದೆ. ಚುನಾವಣೆ ಮುಗಿದ 30 ದಿನಗಳ ಒಳಗಾಗಿ ಅಭ್ಯರ್ಥಿ ವೆಚ್ಚದ ಮಾಹಿತಿಯನ್ನು ನೀಡಬೇಕಿದೆ. ಅವರು ನೀಡಿದ ವೆಚ್ಚದ ಮಾಹಿತಿ ಮತ್ತು ಚುನಾವಣಾ ವೀಕ್ಷಕರು ನೀಡುವ ವೆಚ್ಚದ ಮಾಹಿತಿಯನ್ನು ಹಿರಿಯ ಅಧಿಕಾರಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಒಪ್ಪಿಗೆ ಆದರೆ ಮಾತ್ರ ಲೆಕ್ಕ ಪತ್ರವನ್ನು ಒಪ್ಪಿಕೊಳ್ಳಲಾಗುವುದು ಎಂದು ವಿವರಿಸಿದರು.

ಚುನಾವಣಾ ಕಣದಲ್ಲಿ ಕೆಲವು ಅಭ್ಯರ್ಥಿಗಳು ಡಮ್ಮಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಆಯೋಗ ನೀಡಿದ ವಾಹನವನ್ನು ಬೇರೆ ಅಭ್ಯರ್ಥಿಗಳು ಉಪಯೋಗ ಮಾಡುತ್ತಿರುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಂಚೆ ಮತಪತ್ರಕ್ಕೆ ತರಬೇತಿ:  ಸಮೀಕ್ಷೆ ಪ್ರಕಾರ ಸುಮಾರು 3.5 ಲಕ್ಷ ಸರ್ಕಾರಿ ನೌಕರರು ಚುನಾವಣೆಯಲ್ಲಿ ಮತ ಚಲಾಯಿಸುತ್ತಿಲ್ಲ. ಸಮರ್ಪಕವಾಗಿ ದಾಖಲೆಗಳ ಪ್ರಕ್ರಿಯೆಗಳನ್ನು ಕೈಗೊಳ್ಳದ ಕಾರಣ ಅಂಚೆ ಮತಪತ್ರಗಳು ತಿರಸ್ಕೃತಗೊಳ್ಳುತ್ತಿವೆ. ನೌಕರರು `13 ಎ' ಅರ್ಜಿ ನಮೂನೆ ನೀಡಬೇಕು. ಇದು ಸರಿಯಾಗಿದ್ದರೆ ಮಾತ್ರ ಅಂಚೆ ಮತಪತ್ರ ತೆರೆಯಲಾಗುತ್ತದೆ. ಇಲ್ಲದಿದ್ದರೆ ತಿರಸ್ಕೃತಗೊಳ್ಳುತ್ತದೆ. ಇದುವರೆಗೆ ಉಂಟಾಗಿರುವ ಗೊಂದಲಗಳ ಹಿನ್ನೆಲೆಯಲ್ಲಿ ಚುನಾವಣಾ ತರಬೇತಿ ನೀಡುವಾಗಲೇ ಎಲ್ಲ ಸರ್ಕಾರಿ ನೌಕರರಿಗೆ ಅಂಚೆ ಮತ ಪತ್ರದ ಬಗ್ಗೆ ಮಾಹಿತಿ ನೀಡಲಾಗುವುದು. ಅಂಚೆ ಮತಪತ್ರಗಳ ಸಂಪೂರ್ಣ ನಿರ್ವಹಣೆಗಾಗಿಯೇ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.