ADVERTISEMENT

ಚುನಾವಣೆಗೆ ಸಜ್ಜಾದ `ದಾಳಿಂಬೆ ನಗರಿ'

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 5:41 IST
Last Updated 9 ಏಪ್ರಿಲ್ 2013, 5:41 IST

ಹೊಸದುರ್ಗ: ತಾಲ್ಲೂಕಿನ ಕುಡಿಯುವ ನೀರಿನ ಆಸರೆಯಾದ ವೇದಾವತಿ ನದಿ ಬತ್ತಿ 6 ತಿಂಗಳುಗಳು ಕಳೆದಿವೆ. ಅಂತರ್ಜಲ ಬರಿದಾಗಿದೆ. ಇಂತಹ ಪರಿಸ್ಥಿತಿಯಲೂ ರೈತರು ದಾಳಿಂಬೆ ಬೆಳೆಗೆ ವಿಶೇಷ ಪ್ರಾತಿನಿಧ್ಯ ನೀಡಿ ಹೆಚ್ಚಿನದಾಗಿ ಬೆಳೆಯುತ್ತಿದ್ದಾರೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರನ್ನು ತಲ್ಲಣಗೊಳಿಸಿದೆ. ಕುಡಿಯುವ ನೀರಿಗಾಗಿ ಜನತೆ ಹಾಹಾಕಾರ ಪಡುತ್ತಿರುವ ಸ್ಥಿತಿಯಲ್ಲಿ ಮೇ 5ರಂದು ನಡೆಯಲ್ಲಿರುವ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದೆ.

ಈ ಕ್ಷೇತ್ರದಲ್ಲಿ ಕಳೆದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ತೀವ್ರ ಹಣಾಹಣಿ ಉಂಟಾಗಿದೆ. ಈ ಎರಡೂ ಸ್ಥಾನಗಳಿಗೆ ಇಲ್ಲಿನ ಮತದಾರರು ಹೆಚ್ಚು ಬಾರಿ ಆಶೀರ್ವಾದ ಮಾಡಿರುವ ಹಿನ್ನೆಲೆ ಸಾಕಷ್ಟಿದೆ. 1952ರಿಂದ 2008ರವರೆಗೆ ಒಟ್ಟು 14 ಬಾರಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 7, ಪಕ್ಷೇತರ 5 ಉಳಿದಂತೆ ಪಿಎಸ್‌ಪಿ 1ಹಾಗೂ ಜನತಾ ಪಕ್ಷಕ್ಕೆ 1 ಬಾರಿ ವಿಜಯ ಇಲ್ಲಿ ಸಿಕ್ಕಿದೆ.

ಕುತೂಹಲಕಾರಿ ಸಂಗತಿ ಎಂದರೆ 1952ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಆಗ ಒಟ್ಟು 40,129 ಮತದಾರರಿದ್ದರು. ಅದರಲ್ಲಿ 23,933 ಮತಗಳು ಚಲಾವಣೆಯಾಗಿದ್ದವು. ಅಭ್ಯರ್ಥಿ ಜಿ. ಬಸಪ್ಪ 11,552 ಮತ ಪಡೆದು ವಿಜೇತರಾಗಿ ಈ ಕ್ಷೇತ್ರದ ಪ್ರಥಮ ವಿಧಾನಸಭಾ ಸದಸ್ಯ ಎಂಬ ಹೆಗ್ಗಳಿಕೆಗೆ ಭಾಜನರಾದರು. ಹಾಗೆಯೇ, ಅವರು ಮತ್ತೆ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯ ಸಾಧಿಸಿ ಎರಡನೇ ಬಾರಿಗೆ ಆಯ್ಕೆಯಾದ ಶಾಸಕ ಎಂಬ ಕೀರ್ತಿಗೆ ಪಾತ್ರರಾದರು. 1952ರ ಚುನಾವಣೆಯಲ್ಲಿಯೇ ಪಕ್ಷೇತರ ಅಭ್ಯರ್ಥಿ 7,609 ಮತ ಪಡೆದು ಕಾಂಗ್ರೆಸ್‌ಗೆ ಪೈಪೋಟಿ ನೀಡಿದ್ದು, ಅಂದಿನಿಂದಲೂ ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಮತದಾರರಲ್ಲಿ ವಿಶೇಷ ಛಾಪನ್ನು ಮೂಡಿಸುತ್ತಾ ಬರುತ್ತಿದ್ದಾರೆ.

ಇಲ್ಲಿನ ವೈಶಿಷ್ಟ್ಯ ಎಂದರೆ ಬಿ.ಜಿ. ಗೋವಿಂದಪ್ಪ ಈ ಕ್ಷೇತ್ರದಲ್ಲಿ ಸತತ ಎರಡು ಬಾರಿ ವಿಜೇತರಾಗಿ  ಹೊಸ ಇತಿಹಾಸ ಬರೆದಿದ್ದಾರೆ. ಮತ್ತೊಂದು ಆಶ್ಚರ್ಯ ಸಂಗತಿ ಎಂದರೆ 1989, 1994, 1999ರಲ್ಲಿ ನಡೆದ ಚುನಾವಣೆಯಲ್ಲಿ ಸತತ 3 ಬಾರಿ ಪಕ್ಷೇತರ ಅಭ್ಯರ್ಥಿಗಳೇ ಇಲ್ಲಿ ಜಯ ಸಾಧಿಸಿದ್ದಾರೆ. ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ 1962ರಲ್ಲಿ ಕಾಂಗ್ರೆಸ್‌ನಿಂದ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರನ್ನು ಸೋಲಿಸಿ, ಪಿಎಸ್‌ಪಿಯ ಅಭ್ಯರ್ಥಿ ಜಿ.ಟಿ. ರಂಗಸ್ವಾಮಿ ಗೆಲ್ಲಿಸಿದ ನಿದರ್ಶನವಿದೆ.

ಮೊದಲ ಚುನಾವಣೆಯಿಂದ ಕಳೆದ 2008ರ ಚುನಾವಣೆಯವರೆಗೆ ಕಾಂಗ್ರೆಸ್‌ನ ಭದ್ರಕೋಟೆಯನ್ನು ಅಳಿಸಲು ಇತರ ಅನೇಕ ಪಕ್ಷಗಳು ನಡೆಸಿದ ಪ್ರಯತ್ನ ಹೆಚ್ಚಿನದಾಗಿದೆ. ಚುನಾವಣೆಗೆ ಈ ಕ್ಷೇತ್ರದ ಪಟ್ಟಣದ 23 ವಾರ್ಡ್‌ಗಳು ಹಾಗೂ 4 ಹೋಬಳಿಗಳನ್ನು ಒಳಗೊಂಡಿದ್ದು, ಒಟ್ಟು 2,39,724 ಜನಸಂಖ್ಯೆ ಹೊಂದಿದ್ದು, ಈ ಜನಸಂಖ್ಯೆಯಲ್ಲಿ 1,73,006 ಜನ ಮತದಾರರಿದ್ದಾರೆ. ಇದರಲ್ಲಿ 89,693 ಪುರುಷರು ಹಾಗೂ 83,313 ಮಹಿಳಾ ಮತದಾರರನ್ನು ಒಳಗೊಂಡಿದ್ದು, ಚುನಾವಣೆಯ ಅಖಾಡಕ್ಕಾಗಿ ವಿವಿಧ ಪಕ್ಷಗಳು ಭರದಿಂದ ತಯಾರಿ ನಡೆಸುತ್ತಿವೆ.

2008ರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೂಳಿಹಟ್ಟಿ ಡಿ. ಶೇಖರ್ ಈ ಬಾರಿಯೂ ಪುನರಾಯ್ಕೆಯ ಹಂಬಲದಿಂದ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಕೆಜೆಪಿಯಿಂದ ಎಸ್. ಲಿಂಗಮೂರ್ತಿ ಕಣಕ್ಕಿಳಿಯುವುದು ಖಚಿತವಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಚಿಂತನೆಯಲ್ಲಿ ತೊಡಗಿವೆ.

ಈ ಬಾರಿ ಚುನಾವಣೆಯಲ್ಲಿ ಮತ್ತೆ ಬಿ.ಜಿ. ಗೋವಿಂದಪ್ಪ ಮತ್ತು ಗೂಳಿಹಟ್ಟಿ ಡಿ. ಶೇಖರ್ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ಅವರಿಬ್ಬರಿಗೆ ಪೈಪೋಟಿ ನೀಡಿ ವಿಜೇತರಾಗುವ ಹುನ್ನಾರವನ್ನು ಕೆಜೆಪಿ ಅಭ್ಯರ್ಥಿ ಎಸ್. ಲಿಂಗಮೂರ್ತಿ ನಡೆಸುತ್ತಿದ್ದಾರೆ.

1952ರಿಂದ 2008ರವರೆಗೆ ಆಯ್ಕೆಯಾದವರು
ಕ್ರ.ಸಂ. ವರ್ಷ  ಅಭ್ಯರ್ಥಿ   ಪಕ್ಷ
1. 1952   ಜಿ. ಬಸಪ್ಪ   ಕಾಂಗ್ರೆಸ್

2. 1957   ಬಿ.ಎಸ್. ಶಂಕರಪ್ಪ  ಪಕ್ಷೇತರ
3. 1962   ಜಿ.ಟಿ. ರಂಗಪ್ಪ  ಪಿಎಸ್‌ಪಿ
4. 1967   ಎಂ. ರಾಮಪ್ಪ  ಕಾಂಗ್ರೆಸ್
5. 1972   ಎಂ.ವಿ. ರುದ್ರಪ್ಪ  ಕಾಂಗ್ರೆಸ್
6. 1978   ವೆಂಕಟರಾಮಯ್ಯ  ಕಾಂಗ್ರೆಸ್
7. 1982   ಎಂ.ವಿ. ರುದ್ರಪ್ಪ  ಕಾಂಗ್ರೆಸ್
     (1982ರಲ್ಲಿ ವೆಂಕಟರಾಮಯ್ಯ ನಿಧನದಿಂದಾಗಿ ಉಪ ಚುನಾವಣೆ)
8. 1983   ಜಿ. ಬಸಪ್ಪ   ಜನತಾಪಕ್ಷ
9. 1985   ಜಿ. ರಾಮದಾಸ್  ಕಾಂಗ್ರೆಸ್
10. 1989   ಆರ್. ವಿಜಯ್‌ಕುಮಾರ್  ಪಕ್ಷೇತರ
11. 1994   ಟಿ.ಎಚ್. ಬಸವರಾಜು  ಪಕ್ಷೇತರ
12. 1999   ಬಿ.ಜಿ. ಗೋವಿಂದಪ್ಪ  ಪಕ್ಷೇತರ
13. 2004   ಬಿ.ಜಿ. ಗೋವಿಂದಪ್ಪ  ಕಾಂಗ್ರೆಸ್
14.  2008   ಗೂಳಿಹಟ್ಟಿ ಡಿ. ಶೇಖರ್  ಪಕ್ಷೇತರ

2008ರ ಚುನಾವಣೆ ಬಲಾಬಲದ ನೋಟ
ಕ್ರ.ಸಂ. ಅಭ್ಯರ್ಥಿ    ಪಕ್ಷ ಪಡೆದ ಮತ

1. ಗೂಳಿಹಟ್ಟಿ ಡಿ. ಶೇಖರ್  ಪಕ್ಷೇತರ 41,742
2. ಬಿ.ಜಿ. ಗೋವಿಂದಪ್ಪ  ಕಾಂಗ್ರೆಸ್ 40,523
3.  ಎಸ್. ಲಿಂಗಮೂರ್ತಿ  ಬಿಜೆಪಿ 33,416
4. ಮೀನಾಕ್ಷಿ ನಂದೀಶ್  ಜೆಡಿಎಸ್   3801
5. ಎಚ್.ಎಸ್. ಶ್ರೀಧರ್  ಪಕ್ಷೇತರ    884
6. ಮೋಹನ್‌ಕುಮಾರ್ ಯಾದವ್ ಪಕ್ಷೇತರ    776
7. ಎಸ್.ಆರ್. ದೇವಿರಪ್ಪ  ಪಕ್ಷೇತರ    563
8. ಡಿ. ನಾಗರಾಜು.  ಪಕ್ಷೇತರ       427
9. ಟಿ. ಮಲ್ಲಪ್ಪ   ಪಕ್ಷೇತರ    409
10.  ಪಾವಗಡ ಶ್ರೀರಾಮ್  ಪಕ್ಷೇತರ    378
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.