ADVERTISEMENT

ಚುನಾವಣೆ ನೀತಿಸಂಹಿತೆ ಪಾಲನೆಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:00 IST
Last Updated 5 ಏಪ್ರಿಲ್ 2013, 9:00 IST

ಚಳ್ಳಕೆರೆ: ರಾಜ್ಯದಲ್ಲಿ ನಡೆಯುವ ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಿಗಳು ಚುನಾವಣಾ ಆಯೋಗ ವಿಧಿಸಿರುವ ಕಟ್ಟು ನಿಟ್ಟಿನ ನೀತಿ ಸಂಹಿತೆ ಪಾಲನೆಗೆ ಹೆಚ್ಚು ಒತ್ತು ನೀಡುವ ಮೂಲಕ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಚಂದ್ರಪ್ಪ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದಲ್ಲಿ ಬುಧವಾರ ನಡೆದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮತದಾನ ನಡೆಯುವ ಶಾಲಾ ಕೇಂದ್ರಗಳಲ್ಲಿ ಮತದಾರರಿಗೆ ಕುಡಿಯುವ ನೀರು ಒದಗಿಸುವ ಜವಾಬ್ಧಾರಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ. ಇದಲ್ಲದೇ ಮತದಾನ ನಡೆಯುವ ಮುಂಚಿತವಾಗಿಯೇ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ ಇರಬೇಕು. ದುರಸ್ತಿಯಲ್ಲಿರುವ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂದು ಸೂಚಿಸಿದರು.

ತಾಲ್ಲೂಕು ಕಚೇರಿಯ ಚುನಾವಣೆ ಶಾಖೆಯ ಅಧಿಕಾರಿ ಶ್ರೀರಾಮ ಮಾತನಾಡಿ, ಮತದಾನ ನಡೆಯುವ ಮುಂಚಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿಯ ಸಿಬ್ಬಂದಿಗಳು ಸೂಕ್ಷ್ಮವಾಗಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಗಮನಿಸಬೇಕು. ಮದ್ಯ, ಹಣ ಸಾಗಾಣಿಕೆ ಮಾಡುವ ವಾಹನಗಳನ್ನು ಗುರುತಿಸಬೇಕು. ಮತದಾರರಿಗೆ ಆಮಿಷ ಒಡ್ಡಲು ತರುವ ವಸ್ತುಗಳನ್ನು ಪತ್ತೆ ಹಚ್ಚಿ ತಾಲ್ಲೂಕು ಕಚೇರಿ ಸಹಾಯವಾಣಿಗೆ ಕರೆ ಮಾಡಬೇಕು ಅಥವಾ ಚುನಾವಣೆ ಉಸ್ತುವಾರಿ ತಂಡಕ್ಕೆ ಮಾಹಿತಿ ನೀಡಬೇಕು ಎಂದು ವಿವರಿಸಿದರು.

ಮತದಾನ ನಡೆಯುವ ಕೇಂದ್ರದಲ್ಲಿ ಅವ್ಯವಸ್ಥೆ ಇಲ್ಲದಂತೆ ಜಾಗರೂಕತೆ ವಹಿಸಬೇಕು. ರಾಜಕೀಯ ಪಕ್ಷಗಳ ಬ್ಯಾನರ್‌ಗಳು, ಚುನಾವಣೆಗೆ ಸಂಬಂಧಿಸಿದ ಗೋಡೆ ಬರಹಗಳು ಕಂಡಬಂದಲ್ಲಿ ಅಳಿಸಿ ಹಾಕಬೇಕು. ಚುನಾವಣೆ ಹಿಂದಿನ ದಿನ ಕೇಂದ್ರಗಳಿಗೆ ಆಗಮಿಸುವ ಚುನಾವಣೆ ಸಿಬ್ಬಂದಿ ಬಂದಾಗ ವಿದ್ಯುತ್, ಕುಡಿಯುವ ನೀರು ಇಂತಹ ಸಮಸ್ಯೆಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಆಯೋಗದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು.

ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ, ಇಒ ತಿಪ್ಪೇಸ್ವಾಮಿ, ವ್ಯವಸ್ಥಾಪಕ ಮೈಲಾರಪ್ಪ, ನಾಗಪ್ಪ  ಇದ್ದರು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.