ADVERTISEMENT

ಜಲಸಂವರ್ಧನೆ ಮುಂದುವರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 6:00 IST
Last Updated 9 ಮಾರ್ಚ್ 2012, 6:00 IST

ಹೊಸದುರ್ಗ: ಸಣ್ಣ ನೀರಾವರಿ ಇಲಾಖೆಯಡಿ ವಿಶ್ವಬ್ಯಾಂಕ್ ನೆರವಿನಲ್ಲಿ ಸಮುದಾಯ ಆಧಾರಿತ ಜಲಸಂವರ್ದನೆ ಯೋಜನೆ ಮುಂದುವರಿಸುವಂತೆ ಆಗ್ರಹಿಸಿ ಜಿಲ್ಲಾ ಕೆರೆಬಳಕೆದಾರರ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ತಾಲ್ಲೂಕನ ವಿವಿಧ ಕೆರೆ ಬಳಕೆದಾರರ ಸಂಘಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಜಲಸಂವರ್ಧನೆ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ 23 ಸಣ್ಣನೀರಾವರಿ ಹಾಗೂ ಜಿಲ್ಲಾ ಪಂಚಾಯ್ತಿ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಅಂತರ್ಜಲ ಅಭಿವೃದ್ಧಿಯ ಜತೆಗೆ ಕೃಷಿ ಹಾಗೂ ಇತರೆ ಉಪ ಕಸಬುಗಳಿಗೆ ಕೆರೆ ಬಳಕೆದಾರರ ಸಂಘಗಳ ಮೂಲಕ ಪ್ರೋತ್ಸಾಹ ನೀಡಿ ಪ್ರಗತಿ ಸಾಧಿಸಲಾಗಿದೆ. ಯೋಜನೆಯನ್ನು ಮುಂದುವರಿಸಿದರೆ ರೈತರ ಉನ್ನತಿಗೆ ಕಾರಣವಾಗುವುದು ಎಂದು ಪ್ರತಿಭಟನಾನಿರತರು ಹೇಳಿದರು.

ಜಲಸಂವರ್ಧನೆ ಯೋಜನೆ ಅಡಿಯಲ್ಲಿ ಆಧುನಿಕ ಕೆರೆ ನಿರ್ವಹಣಾ ಕಾರ್ಯಕ್ರಮಗಳನ್ನು ಮುಂದುವರಿಸುವುದು, ಕೆರೆ ಸಂರಕ್ಷಣೆಗೆ ಸಂಬಂಧಿಸಿದ ಕಾನೂನನ್ನು ಬಿಗಿಗೊಳಿಸುವುದು, ಜಲಸಂವರ್ಧನೆ ಯೋನೆಯಡಿ ಕೈಬಿಟ್ಟಿರ ಕರೆಗಳನ್ನು ಯೋಜನೆಯಡಿ ಸೇರಿಸಿ ಅಭಿವೃದ್ಧಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕೆರೆಬಳಕೆದಾರರ ಸಂಘದ ಬಿ.ಸಿ.ಎಂ. ಸ್ವಾಮಿ, ಕೆರೆ ಬಳಕೆದಾರರ ಸಂಘದ ಸದಸ್ಯರಾದ ಮುರುಗೇಂದ್ರಯ್ಯ, ಕಾರೇಹಳ್ಳಿ ಬಸವರಾಜು, ರಾಮಪ್ಪ, ತಿಪ್ಪೇಸ್ವಾಮಿ, ಕೆ.ಟಿ. ಜಯಣ್ಣ, ಈಶ್ವರಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.