ADVERTISEMENT

ಜಾರಿಗೆ ಬಾರದ ‘ಪ್ಯಾಕೇಜ್‌ ದರ‘

ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ: ವಿದ್ಯಾರ್ಥಿಗಳ ದೂರು

​ಪ್ರಜಾವಾಣಿ ವಾರ್ತೆ
Published 29 ಮೇ 2018, 12:21 IST
Last Updated 29 ಮೇ 2018, 12:21 IST

ಮೊಳಕಾಲ್ಮುರು: ಸಾರಿಗೆ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ‘ಪ್ಯಾಕೇಜ್ ಪ್ರಯಾಣದರ’ ಸೌಲಭ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಪ್ರಯಾಣಿಕರನ್ನು ತಲುಪಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ಖಾಸಗಿ ಬಸ್ಸುಗಳಿಗೆ ಪೈಪೋಟಿ ನೀಡಲು ಸಾರಿಗೆ ಬಸ್‌ ಪ್ರಯಾಣ ದರ ಕಡಿತ ಮಾಡಿ, ಬಳ್ಳಾರಿಯ ಈಶಾನ್ಯ ಸಾರಿಗೆ ವಿಭಾಗದ ಬಸ್‌ಗಳಲ್ಲಿ ಬಳ್ಳಾರಿಯಿಂದ ಹಿರಿಯೂರಿನವರೆಗೆ ದರ ನಿಗದಿ ಮಾಡಲಾಯಿತು.

‘ನಂತರ ಇದನ್ನು ಸಾರಿಗೆ ಇಲಾಖೆಯ ಎಲ್ಲಾ ವಿಭಾಗಳ ಬಸ್‌ಗಳಿಗೆ ವಿಸ್ತಾರ ಮಾಡಲಾಯಿತು. ಈ ಸೌಲಭ್ಯ ಜಾರಿಗೆ ಬಂದು 4 ತಿಂಗಳು ಕಳೆದರೂ ಇನ್ನೂ ‘ಪ್ಯಾಕೇಜ್‌ ದರ’ ಜಾರಿ ಮಾಡಿಲ್ಲ. ಡಿಪೊ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳೆ ದರ ತೆತ್ತು ಪ್ರಯಾಣ ಮಾಡಬೇಕಿದೆ. ಈ ಬಗ್ಗೆ ನಿರ್ವಾಹಕರನ್ನು ಕೇಳಿದರೆ ಅವರು ‘ನಮ್ಮನ್ನು ಏನು ಕೇಳುತ್ತೀರಿ ಡಿಪೊಗೆ ದೂರು ನೀಡಿ’ ಎಂದು ಹೇಳುತ್ತಾರೆ ಎಂದು ಪ್ರಯಾಣಿಕರಾದ ಮಂಜುನಾಥ್‌, ರಾಮರೆಡ್ಡಿ, ಶಫಿ ದೂರಿದ್ದಾರೆ.

ADVERTISEMENT

‘ಕೆಲ ಸ್ಥಳಗಳಿಂದ ಪ್ಯಾಕೇಜ್‌ ದರ ಅಪ್‌ಲೋಡ್‌ ಮಾಡಿಲ್ಲ. ಇಂತಹ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಈ ಬಗ್ಗೆ ಡಿಪೊ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದ್ದಾರೆ.

**
ಪ್ಯಾಕೇಜ್‌ ದರ ಅನ್ವಯ ಮಾಡಿಕೊಳ್ಳುವಂತೆ ಈಗಾಗಲೇ ಎಲ್ಲಾ ಡಿಪೊಗಳಿಗೆ ಸೂಚಿಸಲಾಗಿದೆ. ಯಾರು ಇದನ್ನು ಅನುಸರಿಸಿಲ್ಲ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
– ಆರ್‌.ಬಿ. ಜಾಧವ್‌, ಡಿಟಿಒ, ರಾಯಚೂರು ಸಾರಿಗೆ ವಿಭಾಗ

**
ಚಳ್ಳಕೆರೆಯಿಂದ ಬಳ್ಳಾರಿಗೆ ಹಳೆ ದರ ₹107 ಇದ್ದು, ಪ್ಯಾಕೇಜ್‌ ದರದಲ್ಲಿ ಇದನ್ನು ₹ 80 ಕ್ಕೆ ಇಳಿಸಲಾಗಿದೆ. ಆದರೆ ಇದು ಅನೇಕ ಕಡೆ ಜಾರಿಯಾಗಿಲ್ಲ
ಸಾಗರ್, ಪ್ರಯಾಣಿಕ

– ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.