ADVERTISEMENT

ಜಿ.ಪಂ. ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 10:15 IST
Last Updated 9 ಫೆಬ್ರುವರಿ 2011, 10:15 IST

ಚಿತ್ರದುರ್ಗ: ಅತಂತ್ರ ಸ್ಥಿತಿಗೆ ತಲುಪಿರುವ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಫೆ. 9ರಂದು ಚುನಾವಣೆ ನಡೆಯಲಿದೆ.ಒಟ್ಟು 34 ಸ್ಥಾನಗಳಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಗಳಿಸಿ ಮುಂಚೂಣಿ ಸ್ಥಾನದಲ್ಲಿದ್ದರೆ, ಬಿಜೆಪಿ 12 ಹಾಗೂ ಜೆಡಿಎಸ್ ಕೇವಲ 6 ಸ್ಥಾನಗಳನ್ನು ಗಳಿಸಿದೆ. ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಗುಂಪಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಜಿ.ಪಂ. ಚುನಾವಣೆಯ ನಂತರ ಮೈತ್ರಿ ಕುರಿತು ನಡೆಯುತ್ತಿರುವ ಸಮಾಲೋಚನೆ, ಚರ್ಚೆಗಳು ಈಗ ನಿರ್ಣಾಯಕ ಘಟಕ್ಕೆ ಬಂದು ನಿಂತಿವೆ. ಅತಿ ಹೆಚ್ಚು ಸ್ಥಾನ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್‌ಗೂ ಅನಿವಾರ್ಯವಾಗಿ ಪರಿಣಮಿಸಿದೆ.ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆಗಾಗಿ ಮತ್ತು ಮೈತ್ರಿಗಾಗಿ ಇಡೀ ದಿನ ಸಮಾಲೋಚನೆಗಳು ನಡೆದವು. ಕಾಂಗ್ರೆಸ್‌ನ ಹಿರಿಯ ಮುಖಂಡ ಕೋಳಿವಾಡ ಅವರು ಮಂಗಳವಾರ ನಗರಕ್ಕೆ ಆಗಮಿಸಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ಹಾಗೂ ಇತರ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಜತೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಮೈತ್ರಿ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.

‘ಕಾಂಗ್ರೆಸ್ ನಿಲುವು ಬದಲಾಗಿಲ್ಲ. ಅಧ್ಯಕ್ಷ ಸ್ಥಾನವನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಅಧ್ಯಕ್ಷ ಸ್ಥಾನ ದೊರೆಯದಿದ್ದರೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಹಿಂಜರಿಯುವುದಿಲ್ಲ. ಕೆಪಿಸಿಸಿ ಸಹ ಇದೇ ರೀತಿ ನಿರ್ದೇಶನ ನೀಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಯಾವ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಿದೆಯೋ ಆ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರಿಗೂ ತಿಳಿಸಿದೆ. ಈ ಬಗ್ಗೆ ಮಾತುಕತೆಯೂ ಆಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಮಹಾಲಿಂಗಪ್ಪ, ಅನಿತಾ ಬಸವರಾಜು, ಕವಿತಾ ಮಹೇಶ್, ಇಂದಿರಾ ಕಿರಣ್, ಕರಿಯಮ್ಮ ಶಿವಣ್ಣ, ಜಯ್ಯಮ್ಮ ಬಾಲರಾಜ್, ಗೀತಾ ಬಸವರಾಜ್,  ಸಣ್ಣತಿಮ್ಮಕ್ಕ ಬಿಸಿಎಂ ‘ಎ’ ವರ್ಗಕ್ಕೆ ಸೇರಿದ್ದಾರೆ. ಇವರಲ್ಲಿ ಯಾರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.ಇದುವರೆಗೆ ಅಧ್ಯಕ್ಷ ಸ್ಥಾನಕ್ಕೆ ತನ್ನ ಆಕಾಂಕ್ಷೆಯನ್ನು ಬಹಿರಂಗವಾಗಿಯೇ ಮುಂದಿಟ್ಟಿದ್ದ ಜೆಡಿಎಸ್ ಒಂದು ಹೆಜ್ಜೆ ಹಿಂದೆ ಇರಿಸಿದೆ. ಮೂಲಗಳ ಪ್ರಕಾರ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ತೃಪ್ತಿಪಟ್ಟುಕೊಳ್ಳಲಿದೆ.

‘ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಉಪಾಧ್ಯಕ್ಷ ಸ್ಥಾನ ಜೆಡಿಎಸ್ ವಹಿಸಿಕೊಳ್ಳಲಿದೆ’ ಎಂದು ಶಾಸಕ ಎಸ್.ಕೆ. ಬಸವರಾಜನ್ ತಿಳಿಸಿದರು.
ಸುಧಾಕರ ನಡೆ ನಿರ್ಣಾಯಕ ಒಟ್ಟಾರೆ ಈ ರಾಜಕೀಯ ದಾಳದಲ್ಲಿ ಮಾಜಿ ಸಚಿವ ಡಿ. ಸುಧಾಕರ್ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದ್ದಾರೆ. ತಮ್ಮ ಬೆಂಬಲದಿಂದ ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಆಯ್ಕೆಯಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಜಿ.ಪಂ. ಸದಸ್ಯರನ್ನು ಮುಂದಿಟ್ಟುಕೊಂಡು ತಮ್ಮ ದಾಳವನ್ನು ಉರುಳಿಸುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ.ಮಂಗಳವಾರ ಮಾಜಿ ಸಚಿವ ಡಿ. ಸುಧಾಕರ್, ಶಾಸಕ ಎಸ್.ಕೆ. ಬಸವರಾಜನ್, ಜಿ.ಪಂ. ಮಾಜಿ ಅಧ್ಯಕ್ಷ ಜಯಣ್ಣ, ಸದಸ್ಯರಾದ ಜಯಣ್ಣ ಮತ್ತಿತರರ ಜತೆ ಸಮಾಲೋಚನೆ ನಡೆಸಿದರು.

ನಂತರ ಡಿ. ಸುಧಾಕರ್, ಎಸ್.ಕೆ. ಬಸವರಾಜನ್, ಕೋಳಿವಾಡ, ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ ಮತ್ತಿತರರು ಸಮಾಲೋಚನೆ ನಡೆಸಿದರು.ಈ ನಡುವೆ, ಅಧ್ಯಕ್ಷ ಸ್ಥಾನದ ಆಸೆ ತೋರಿಸುವ ಮೂಲಕ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ಬಿಜೆಪಿ ಆಸೆ ಕಮರಿಹೋಗಿದೆ. ಇದುವರೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಅಧಿಕೃತವಾಗಿ ಮಾತುಕತೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ವಿಪ್ ಜಾರಿ
ಬಿಜೆಪಿ ತನ್ನ ಸದಸ್ಯರಿಗೆ ಮಂಗಳವಾರ ಸಂಜೆ ವಿಪ್ ಜಾರಿ ಮಾಡುವ ಮೂಲಕ ಹೊಸ ಕಾರ್ಯತಂತ್ರ ರೂಪಿಸಿದೆ.‘ನಮ್ಮನ್ನು ಇದುವರೆಗೆ ಅಧಿಕೃತವಾಗಿ ಯಾರೂ ಸಂಪರ್ಕಿಸಿಲ್ಲಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಹೇಳಿದ್ದೆವು. ಉಪಾಧ್ಯಕ್ಷ ಸ್ಥಾನದ ಬಗ್ಗೆ ಹೇಳಿಲ್ಲ. ಆದರೆ, ಇದುವರೆಗೆ ನಮ್ಮ ಬಳಿ ಯಾರೂ ಬಂದಿಲ್ಲ. ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧ.

ಆದರೆ, ನಾವು ವಿಪ್ ಜಾರಿ ಮಾಡಿದ್ದೇವೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಾವು ಸ್ಪರ್ಧಿಸುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್ ತಿಳಿಸಿದ್ದಾರೆ.ಒಟ್ಟಿನಲ್ಲಿ ಕೊನೆಯ ಕ್ಷಣದವರೆಗೂ ನಡೆಯುವ ರಾಜಕೀಯ ಪ್ರಹಸನದಲ್ಲಿ ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.