ADVERTISEMENT

ಜಿಲ್ಲಾಧಿಕಾರಿ ಕಚೇರಿ ಮುಂದೆ ದಸಂಸ ಧರಣಿ.ದಲಿತರ ಮೂಲಹಕ್ಕು ಜಾರಿಗೆ ಒತ್ತಾಯ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 7:00 IST
Last Updated 15 ಫೆಬ್ರುವರಿ 2011, 7:00 IST

ಚಿತ್ರದುರ್ಗ: ದಲಿತರ ಸಮಗ್ರ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.ಮುಂಬರುವ 2011-12ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆಯ ಶೇ. 23ರ ಪ್ರಮಾಣದಷ್ಟು ಹಣವನ್ನು ರಾಷ್ಟ್ರೀಯ ಯೋಜನಾ ಆಯೋಗದ ನಿರ್ದೇಶನದಂತೆ ಏಕಗವಾಕ್ಷಿ ಮೂಲಕ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಅನುಮೋದಿಸಿ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.ಸರ್ಕಾರಿ ಭೂಮಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಭೂಹೀನರಿಗೆ ಹಂಚುವ ಮೂಲಕ ಭೂಮಂಜೂರಾತಿ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಿ.ಟಿ.ಸಿ.ಎಲ್. ಅಧಿನಿಯಮ 1978ರ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಈ ಪ್ರಕರಣಗಳು ವಿಳಂಬವಾಗುವ ಕಾರಣದಿಂದ ವಿಶೇಷ ಕಂದಾಯ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಿ ಮಾಸಾಶನವನ್ನು ` 1 ಸಾವಿರಕ್ಕೆ ಹೆಚ್ಚಿಸಬೇಕು. ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ಗುತ್ತಿಗೆ ಪೌರಕಾರ್ಮಿಕ ಮತ್ತು ಹಾಸ್ಟೆಲ್ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು. ಖಾಸಗಿ ಕ್ಷೇತ್ರ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ಮೀಸಲಾತಿ ಜಾರಿ ಮಾಡಬೇಕು. ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರದ ಸೌಲಭ್ಯ ಕಬಳಿಸುತ್ತಿರುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರೈತರ ಸಾಲ ಮನ್ನಾ ಮಾಡಿದಂತೆ ದಲಿತರು ಪಡೆದ ಸಾಲವನ್ನು ಮನ್ನಾ ಮಾಡಬೇಕು. ಯೂನಿಟ್ ಪದ್ಧತಿ ರದ್ದುಪಡಿಸಬೇಕು ಎಂದುಆಗ್ರಹಿಸಿದರು.

ಮುಖಂಡರಾದ ಎಂ. ಜಯಣ್ಣ, ಡಿ. ದುರುಗೇಶ್, ಮುರುಘರಾಜೇಂದ್ರ ಒಡೆಯರ್, ಪಾಂಡುರಂಗಸ್ವಾಮಿ, ಕೆ. ಓಂಕಾರಪ್ಪ, ಕೆ. ರಾಜಣ್ಣ, ಡಿ.ಆರ್. ಲಿಂಗರಾಜು, ಆರ್. ರುದ್ರಮುನಿ, ಮಲ್ಲಿಕಾರ್ಜುನ್, ಬಸವರಾಜು, ಟಿ. ಮಲ್ಲೇಶಪ್ಪ, ಕೃಷ್ಣಮೂರ್ತಿ, ಕಸ್ತೂರಪ್ಪ, ನವೀದ್, ಟಿ. ಮಂಜಣ್ಣ, ಜಯಪ್ಪ, ತಿಮ್ಮರಾಜು, ಮಂಜುನಾಥ್, ಪರಮೇಶ್ವರಪ್ಪ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.