ADVERTISEMENT

ಜೆಡಿಎಸ್‌ಗೆ ಒಲಿದ ತಾ.ಪಂ. ಗದ್ದುಗೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 6:15 IST
Last Updated 12 ಫೆಬ್ರುವರಿ 2011, 6:15 IST

ಹಿರಿಯೂರು: ಇಲ್ಲಿನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೊದಲ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಆರ್. ಅನುರಾಧಾ ಹಾಗೂ ಉಪಾಧ್ಯಕ್ಷೆಯಾಗಿ ಪಿ. ಪುಷ್ಪಾ ಅವಿರೋಧವಾಗಿ ಆಯ್ಕೆ ಆದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಟಿ. ಭಾರತಿ ಹಾಗೂ ಫಕೃದ್ದೀನ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯ ನಂತರ ಕಾಂಗ್ರೆಸ್ ಪಕ್ಷದ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆದ ಕಾರಣ ಅನುರಾಧಾ ಮತ್ತು ಪುಷ್ಪಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ವೆಂಕಟೇಶ್ ಘೋಷಿಸಿದರು.

ಒಟ್ಟು 22 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್ 11, ಕಾಂಗ್ರೆಸ್ 4, ಬಿಜೆಪಿ 1 ಹಾಗೂ ಪಕ್ಷೇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಹರಿಯಬ್ಬೆ ಕ್ಷೇತ್ರದಿಂದ ವಿಜೇತರಾಗಿದ್ದ ಅರುಣಾ ಪಾಟೀಲ್ ಹಾಗೂ ಯಲ್ಲದಕೆರೆ ಕ್ಷೇತ್ರದ ಸಿದ್ಧಗಂಗಮ್ಮ ಮಾಜಿ ಸಚಿವ ಡಿ. ಸುಧಾಕರ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರಿದ್ದರು. ಹೀಗಾಗಿ ಜೆಡಿಎಸ್ ಪಕ್ಷದ ಬಲ 13 ಕ್ಕೆ ಏರಿತ್ತು.

ಕಳೆದ ಅವಧಿಯಲ್ಲಿಯೂ ತಾ.ಪಂ. ಆಡಳಿತ ಜೆಡಿಎಸ್ ಕೈಯಲ್ಲಿತ್ತು. ಈ ಬಾರಿ ಮಾಜಿ ಸಚಿವ  ಡಿ. ಸುಧಾಕರ್ ಬೆಂಬಲದಿಂದ ಅಧಿಕಾರವನ್ನು ಮತ್ತೆ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಪಕ್ಷ ಯಶಸ್ವಿ ಆಗಿದೆ. ಅಧ್ಯಕ್ಷ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳಲ್ಲಿ ತೀವ್ರ ಸ್ಪರ್ಧೆ ಇದ್ದ ಕಾರಣ, ಅನುರಾಧಾ ಅವರ ಅಧಿಕಾರದ ಅವಧಿಯನ್ನು ಆರು ತಿಂಗಳಿಗೆ ಮಿತಿಗೊಳಿಸಲಾಗಿದೆ. ಉಪಾಧ್ಯಕ್ಷ ಸ್ಥಾನದ ಅವಧಿಯನ್ನು 10 ತಿಂಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ. ಜಯಣ್ಣ ಸುದ್ದಿಗಾರರಿಗೆ ತಿಳಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.