ADVERTISEMENT

ಜೆಡಿಎಸ್ ನೀತಿಸಂಹಿತೆ ಉಲ್ಲಂಘನೆ; ಕಾಂಗ್ರೆಸ್ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 9:56 IST
Last Updated 23 ಮಾರ್ಚ್ 2014, 9:56 IST

ಚಿತ್ರದುರ್ಗ: ‘ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಚುನಾವಣಾ ಆಯೋಗ ಸೂಚನೆ ನೀಡಿದ್ದರೂ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್ ಮತದಾರರ ಮನವೊಲಿಸಲು ದೇವರ ಚಿತ್ರಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಆರೋಪಿಸಿದ್ದಾರೆ.

ನಗರದ ಹೊಟೇಲ್‌ವೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಪ್ರಚಾರದ ಕರಪತ್ರದ ಹಿಂಭಾಗದಲ್ಲಿ ಹಿಂದೂ ದೇವತೆಗಳ ಭಾವಚಿತ್ರಗಳನ್ನು ಮುದ್ರಿಸಿ ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ ನಂತರ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್‌ನವರು ಮತಯಾಚನೆಗೆ ಬಳಸುತ್ತಿದ್ದ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಭ್ಯರ್ಥಿ ಮೇಲೆ ದೂರು ದಾಖಲಿಸಿದ್ದಾರೆ’ ಎಂದು ವಿವರಿಸಿದರು.

‘ತಮ್ಮ ಪಕ್ಷದ ಸಾಧನೆ ಮತ್ತು ಅಭಿವೃದ್ಧಿಯನ್ನು ಮತದಾರರ ಬಳಿ ಹೇಳಿಕೊಂಡು ಪಾರದರ್ಶಕವಾಗಿ ಚುನಾವಣೆಯಲ್ಲಿ ಗೆಲ್ಲಲಿ. ಅದನ್ನು ಬಿಟ್ಟು ಮತದಾರರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು’ ಎಂದು ಜಗದೀಶ್ ಅವರು ಗೂಳಿಹಟ್ಟಿ  ಶೇಖರ್ ಅವರನ್ನು ಎಚ್ಚರಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಸಂಚಾಲಕ ಬಿ.ಪಿ.ಪ್ರಕಾಶ್‌ಮೂರ್ತಿ, ಜಿಲ್ಲಾಧ್ಯಕ್ಷ ಓ.ಶಂಕರ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಶಫಿವುಲ್ಲಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಡಿ.ಎಸ್.ಸೈಯದ್‌ ವಲಿಖಾದ್ರಿ, ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

‘ವಿರೋಧ ಪಕ್ಷದ ಕೆಲಸ’
‘ಜೆಡಿಎಸ್ ಅಭ್ಯರ್ಥಿ ದೇವರ ಚಿತ್ರ ಬಳಸಿ ಚುನಾವಣಾ ಪ್ರಚಾರ ಮಾಡುವ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆ’ ಎಂಬ ಕಾಂಗ್ರೆಸ್ ಪಕ್ಷದ ಆರೋಪವನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಖಂಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದು ವಿರೋಧ ಪಕ್ಷದವರ ಕುತಂತ್ರ. ನಮ್ಮ ಅಭ್ಯರ್ಥಿ ಹೆಸರನ್ನು, ಭಾವಚಿತ್ರವನ್ನು ಬಳಸಿಕೊಂಡು ಈ ರೀತಿ ಮಾಡಲಾಗಿದೆ. ದೇವರ ಚಿತ್ರಗಳನ್ನು ಪ್ರಚಾರಕ್ಕೆ ಬಳಸುವುದು ನಮ್ಮ ಪಕ್ಷದ ಸಂಸ್ಕೃತಿಯೇ ಅಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಹೆಸರಿಗೆ ಮಸಿ ಬಳಿಯಲು, ಅಭ್ಯರ್ಥಿ ಶಕ್ತಿ ಕುಂದಿಸಲು ಇಂಥ ಪ್ರಯತ್ನಗಳು ನಡೆಯುತ್ತವೆ. ಅದಕ್ಕೆ ನಾವು ಉತ್ತರ ಹೇಳುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT