ADVERTISEMENT

ಟ್ಯಾಂಕ್‌ನಲ್ಲಿ ಕುಡಿಯುವ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 10:35 IST
Last Updated 12 ಅಕ್ಟೋಬರ್ 2012, 10:35 IST

ಚಿತ್ರದುರ್ಗ: ಕುಡಿಯುವ ನೀರಿನ ಅಭಾವವಿರುವ ಕಡೆಗಳಲ್ಲಿ ತಕ್ಷಣದಿಂದಲೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಾರಾಯಣಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ. ಗೀತಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ನೀರಿಗಾಗಿ ಜನರು ಪರದಾಡುತ್ತಿದ್ದಾರೆ.  ಸಾರ್ವಜನಿಕ ಕೊಳವೆಬಾವಿಗಳಿಂದ ನೀರು ಪಡೆದು ಅಗತ್ಯವಿರುವ ಕಡೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಸೂಚಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಬಸವರಾಜ್, ಹಲವು ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ವಿದ್ಯಾರ್ಥಿಗಳಿಗೆ ತೊಂದೆಯಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಮಂಜುನಾಥ್, ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ವರದಿ ತರಿಸಿಕೊಳ್ಳಲಾಗಿದೆ ಎಂದರು. ಇದಕ್ಕೆ, ಸಿಇಒ ಪ್ರತಿಕ್ರಿಯಿಸಿ, ನಾಲ್ಕು ದಿನಗಳ ಒಳಗೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಹೊಳಲ್ಕೆರೆಯಲ್ಲಿ ನೀರಿನ ತೊಂದರೆಯಿದೆ ಕೊಳವೆಬಾವಿಗಳ ಮೂಲಕ ಅಥವಾ ಟ್ಯಾಂಕರ್‌ಗಳ ಮೂಲಕ ಯಾವುದೇ ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಮಾದರಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಕನಿಷ್ಠ 50*50 ಅಳತೆಯ ನಿವೇಶನ ಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಎನ್.ಕೆ. ಪಾಟೀಲ್ ಮಧ್ಯಂತರ ವರದಿಯಲ್ಲಿ ಸೂಚಿಸಿ ಆದೇಶ ನೀಡಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಸ್ತಾಂತರ ಮಾಡಿರುವ ನಿವೇಶನಗಳ ಅಳತೆ 30್ಡ40 ಅಳತೆ ಇದೆ ಎಂದು ಇಲಾಖೆ ಅಧಿಕಾರಿ ನಂಜೇಗೌಡ ಅವರು ಸಭೆಗೆ ತಿಳಿಸಿದರು.
ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ದ್ಯಾಮಣ್ಣ, ಯೋಜನಾಧಿಕಾರಿ ಚಂದ್ರಪ್ಪ ಹಾಜರಿದ್ದರು.

ಮರಳು ಗಣಿಗಾರಿಕೆ ಸ್ಥಗಿತಕ್ಕೆ ಸೂಚನೆ
ಪ್ರಕೃತಿಗೆ ವಿರುದ್ಧವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸಿಇಒ ನಾರಾಯಣಸ್ವಾಮಿ ಅಧಿಕಾರಿಗೆ ಸೂಚಿಸಿದರು.

ಮರಳು ಗಣಿಗಾರಿಕೆ ಕುರಿತು ಲೋಕೋಪಯೋಗಿ ಕಾರ್ಯಪಾಲಕ ಎಂಜಿನಯರ್ ಗೋವಿಂದಪ್ಪ ಸಭೆಗೆ ಸೂಕ್ತ ಮಾಹಿತಿ ನೀಡದಿದ್ದಕ್ಕೆ ಸಿಟ್ಟಾದ ಸಿಇಒ, ಮೊದಲು ಮಾಹಿತಿ ಇಟ್ಟುಕೊಂಡು ಮಾತನಾಡಿ ವಿಷಯ ತಿಳಿದುಕೊಳ್ಳದೇ ಮಾತನಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ವೇದಾವತಿ ನದಿ ತೀರದಲ್ಲಿ ಮರಳು ಗಣೆಗಾರಿಕೆ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ಜಿಲ್ಲೆಯ ಸಂಪತ್ತನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಗುತ್ತಿಗೆದಾರರು ಹಾಗೂ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ವೇದಾವತಿ ನದಿ ತೀರದ ಮರಳನ್ನು ಗಣಿಗಾರಿಕೆಗೆ ಬಳಸದಂತೆ ಹೈಕೋರ್ಟ್‌ನಿಂದ ತಡೆಯಾಡ್ಞೆ ನೀಡಿದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮರಳು ಮಾರಾಟ ಮಾಡುವಂತಿಲ್ಲ. ಮರಳು ಗಣಿಗಾರಿಕೆ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಅಧಿಕಾರಿ ಮುಂದಾಗಬೇಕು ಎಂದರು. 

ಮರಳು ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯ್ತಿ ಇಒ ಹಾಗೂ ಜಿ.ಪಂ. ಯೋಜನಾ ಅಧಿಕಾರಿಗಳ ತಂಡ ಭೇಟಿ ನೀಡಿ ಪೂರ್ಣ ತನಿಖೆ ನಡೆಸಬೇಕು. 3 ಅಡಿಗಿಂತ ಕೆಳಗೆ ಯಾರೇ ಆಗಲಿ ನಿಯಮ ಬಾಹಿರವಾಗಿ ಮರಳು ತೆಗೆದಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.