ADVERTISEMENT

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ:ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಕರೆ,

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 9:15 IST
Last Updated 15 ಏಪ್ರಿಲ್ 2012, 9:15 IST

ಹಿರಿಯೂರು: ಜಾತಿ ವಿನಾಶಕ್ಕೆ ಕಾರಣರಾದವರು ಅಂತರ್ಜಾತಿ ವಿವಾಹಿತರು ಮಾತ್ರ. ಜಾತಿ ನಿರಾಕರಣೆ ಮಾಡುವ ಮೂಲಕ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು ಎಂದು ಸಾಹಿತಿ ಕೆ.ಬಿ. ಸಿದ್ದಯ್ಯ ಕರೆ ನೀಡಿದರು.

ನಗರದ ನೆಹರು ಮೈದಾನದಲ್ಲಿ ಶನಿವಾರ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟರಿಗೆ ಮಾತ್ರ ಮೀಸಲು ಕಲ್ಪಿಸಲಿಲ್ಲ. ದೇಶದ ಎಲ್ಲಾ ಭಾಷೆ, ಪ್ರಾಂತ್ಯ, ಲಿಂಗ ತಾರತಮ್ಯವಿಲ್ಲದೆ ಮೀಸಲಾತಿ ಕಲ್ಪಿಸಿದರು. ದಲಿತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ. ಸುಧಾಕರ್, ಮುಂದಿನ ವಾರ ರೂ 3.40 ಕೋಟಿ  ವೆಚ್ಚದಲ್ಲಿ ಅಂಬೇಡ್ಕರ್-ಜಗಜೀವನರಾಂ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಡಾ.ಹೊನ್ನೂರ್‌ಆಲಿ ಮಾತನಾಡಿ, ಇಂದು ದಲಿತ ಸಮುದಾಯದವರು ಅಧಿಕಾರ ಹಿಡಿದಿದ್ದರೆ, ಅವರ ಬದುಕು ಹಸನಾಗಿದ್ದರೆ ಅದಕ್ಕೆ ಅಂಬೇಡ್ಕರ್ ಜಾರಿಗೆ ತಂದ ಮೀಸಲಾತಿ ಕಾರಣ ಎಂದರು.
ಡಾ.ಗುರುನಾಥ್, ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿದರು.

ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಎಸ್. ಪ್ರಕಾಶ್, ಕೆ. ದ್ಯಾಮೇಗೌಡ, ಆರ್. ಹೇಮಂತಕುಮಾರ್, ಜ್ಯೋತಿಲಕ್ಷ್ಮೀ ಗೋಪಿಯಾದವ್, ಪಿ.ಪುಷ್ಪ ತಮ್ಮಣ್ಣ, ಡಾ.ಸುಜಾತಾ, ಕೆ. ಓಂಕಾರಪ್ಪ, ಬೋರನಕುಂಟೆ ಜೀವೇಶ್, ಕೆ. ತಿಮ್ಮರಾಜು, ಟಿ. ಕಾಂತಯ್ಯ, ಗುರುಶ್ಯಾಮಯ್ಯ, ಈ. ಮಂಜುನಾಥ್, ದಿವಾಕರ್ ನಾಯಕ್, ಬಸವರಾಜ ನಾಯಕ್, ಟಿ. ರಂಗನಾಥ್, ಬಿ.ಆರ್. ಚಿನ್ನರಾಜು, ವೈ. ಮಹಂತಪ್ಪ, ಎನ್. ಚಂದ್ರಾನಾಯ್ಕ, ಸಿ. ಶೇಖರಪ್ಪ, ಜಿ.ಆರ್. ರಮೇಶ್, ವೈ.ಆರ್. ಚೌಧರಿ, ಎಚ್.ಎನ್. ಚಂದ್ರಶೇಖರಪ್ಪ, ರೋಷನ್‌ಜಮೀರ್ ಮತ್ತಿತರರು ಹಾಜರಿದ್ದರು.
ಎಂ. ರೇವಣಸಿದ್ದಪ್ಪ ಸ್ವಾಗತಿಸಿದರು. ಎನ್. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ವಿ. ಕೃಷ್ಣಮೂರ್ತಿ ವಂದಿಸಿದರು.

ಇದೇ ವೇಳೆ, ಎಸ್ಸೆಸ್ಸೆಲ್ಸಿ, ಪಿಯು ಮತ್ತು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳನ್ನು ಶಾಸಕ ಸುಧಾಕರ್ ಸನ್ಮಾನಿಸಿದರು. ಅಂತರ್ಜಾತಿ ವಿವಾಹವಾದ 27 ಜೋಡಿಗೆ ತಲಾ ರೂ 20 ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು.

ವಾಣಿ ಕಾಲೇಜಿನಲ್ಲಿ ಆಚರಣೆ: ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಶನಿವಾರ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಆಚರಿಸಲಾಯಿತು.

ಧಾರವಾಡದ ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ, ಡಾ.ಚಿಂತಾಮಣಿ ಕೂಡ್ಲೆಕೆರೆ, ಎಚ್.ಒ. ತಿಪ್ಪೇಸ್ವಾಮಿ ಮಾತನಾಡಿದರು.ಪ್ರಾಂಶುಪಾಲ ಪ್ರೊ.ವೈ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ರಾಜಶೇಖರಯ್ಯ, ದೊಡ್ಡಬಸಪ್ಪ, ಮಲ್ಲಿಕಾರ್ಜುನ, ರಂಗಲಕ್ಷ್ಮಮ್ಮ, ರಂಗಮ್ಮ, ರಾಘವೇಂದ್ರ, ದಯಾನಂದ, ಮಹಾಂತೇಶ್, ಗೋವಿಂದರಾಜು  ಇದ್ದರು.ಎಚ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಪ್ರೊ.ಕೀರ್ತಿಕುಮಾರ್ ವಂದಿಸಿದರು.

ರಂಗನಾಥ ಶಿಕ್ಷಕರ ತರಬೇತಿ ಸಂಸ್ಥೆ: ಹುಳಿಯಾರು ರಸ್ತೆಯಲ್ಲಿರುವ ರಂಗನಾಥ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಜಯಂತಿಯನ್ನು ಸಂಸ್ಥೆಯ ಕಾರ್ಯದರ್ಶಿ ಟಿ. ವೀರಕರಿಯಪ್ಪ ಉದ್ಘಾಟಿಸಿದರು.

ಉಪನ್ಯಾಸಕ ದಯಾನಂದಗೌಡ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎನ್. ಧನಂಜಯ ಮಾತನಾಡಿದರು. ನಿವೃತ್ತ ಶಿಕ್ಷಕ ರಾಜಪ್ಪ, ಯೋಗೀಶ್, ಮುತ್ತುರಾಜ್, ಮಲ್ಲಿಕಾರ್ಜುನ್, ತೇರುಮಲ್ಲೇಶ್ ಹಾಜರಿದ್ದರು.
ಅನಿತಾ ಸ್ವಾಗತಿಸಿದರು. ಗೌತಮಿ ವಂದಿಸಿದರು. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ನ್ಯಾಯ ಮರೀಚಿಕೆ~

ಚಳ್ಳಕೆರೆ: ತಳ ಸಮುದಾಯಗಳ ಏಳಿಗೆಗಾಗಿ ಅವಿರತ ಹೋರಾಟ ನಡೆಸಿದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂ ಅವರ ತತ್ವ ಮತ್ತು ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಚಳ್ಳಕೆರೆ ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್ ರಾಮಚಂದ್ರಪ್ಪ ಮಾತನಾಡಿ, ಶೋಷಿತರ ಬದುಕು ಹಸನುಗೊಳಿಸಲು ಹೋರಾಡಿದ ನಾಯಕರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೀರಭದ್ರಯ್ಯ ಮಾತನಾಡಿ, ಯಾವ ಸಮುದಾಯಗಳು ಒಗ್ಗಟ್ಟಿನಿಂದ ಸಂವಿಧಾನದ ಸೌಲಭ್ಯ ಪಡೆದು ಆರ್ಥಿಕ, ಶಿಕ್ಷಣ ಹಾಗೂ ರಾಜಕೀಯ ಅಧಿಕಾರ ಪಡೆಯಬೇಕಾಗಿತ್ತೋ ಅಂತಹ ಸಮುದಾಯಗಳು ಸಂಘರ್ಷಕ್ಕೆ ಮುಂದಾಗಿರುವುದು ದುರಂತ ಎಂದು ವಿಷಾದಿಸಿದರು.

ದಸಂಸ ತಾಲ್ಲೂಕು ಸಂಚಾಲಕ ವಿಜಯ್‌ಕುಮಾರ್, ದಲಿತ ಮುಖಂಡ ಕೆ.ಪಿ. ತಾರಕೇಶ್ ಮಾತನಾಡಿದರು. ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಆನಂದ ಸೂರ್ಯವಂಶಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಹಾಗೂ ಡಿ. ಮಂಜುನಾಥ್ ಅವರು ಡಾ.ಬಾಬು ಜಗಜೀವನ್ ರಾಂ ಕುರಿತು ಉಪನ್ಯಾಸ ನೀಡಿದರು. 

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷ ತಿಪ್ಪೇಶ್‌ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ ತಳವಾರ, ಡಿ. ಈಶ್ವರಪ್ಪ ಮಾತನಾಡಿದರು.

ಸಮಾಜ ಕಲ್ಯಾಣ ಅಧಿಕಾರಿ ಎ.ಎಸ್.ಎನ್. ಪ್ರೇಮಾ, ಡಾ.ಸಿ.ಎಲ್. ಫಾಲಾಕ್ಷ, ಬೆಳಗೆರೆ ರಮೇಶ್, ಜಿ.ಪಂ. ಸದಸ್ಯ ಜಯಪಾಲಯ್ಯ, ವಲಯ ಅರಣ್ಯಾಧಿಕಾರಿ ಸುರೇಶ್, ಲೋಕೋಪಯೋಗಿ ಎಂಜಿನಿಯರ್ ರಾಮಚಂದ್ರಪ್ಪ, ಬಿಇಒ ತಿಮ್ಮಣ್ಣ, ಡಾ. ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

ಅಂಬೇಡ್ಕರ್ ಭವನ

ಹೊಳಲ್ಕೆರೆ: ಪಟ್ಟಣದಲ್ಲಿ ರೂ 2.5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ಪಟ್ಟಣದಲ್ಲಿ ಶನಿವಾರ ನಡೆದ ಬಾಬು ಜಗಜೀವನರಾಂ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಯಾವುದೋ ಒಂದು ಜಾತಿ, ವರ್ಗಕ್ಕೆ ಸೀಮಿತವಲ್ಲ. ಇಡೀ ಸಮಾಜದ ಪ್ರಗತಿ, ಸುಧಾರಣೆಗೆ ಅವರು ಸೇವೆ ಸಲ್ಲಿಸಿದರು. ಅವರ ಸಾಧನೆಗಳು ನಮಗೆ ದಾರಿ ದೀಪವಾಗಬೇಕು. ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಈ ಬಾರಿಯ ಬಜೆಟ್‌ನಲ್ಲಿ ರೂ 16 ಸಾವಿರ ಕೋಟಿ ಹಣವನ್ನು ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಡಬೇಕಿತ್ತು.

ಆದರೆ, ರೂ 3 ಸಾವಿರ ಕೋಟಿ ಹಣ ತೆಗೆದಿರಿಸಿದ್ದು, ಅನ್ಯಾಯವಾಗಿದೆ. ಕಳೆದ ಬಾರಿ ನಾನು  8 ಸಾವಿರ ಕೋಟಿ ಅನುದಾನ ಕೊಡಿಸಿದ್ದೆ ಎಂದರು.ಕವಿ ಚಂದ್ರಶೇಖರ ತಾಳ್ಯ ಉಪನ್ಯಾಸ ನೀಡಿ, ಡಾ.ಬಿ.ಆರ್. ಅಂಬೇಡ್ಕರ್ ಕನಸುಗಳನ್ನು ಜನಪ್ರತಿನಿಧಿಗಳು, ದಲಿತ ಚಿಂತಕರು ಸರಿಯಾಗಿ ಅರ್ಥೈಸಿಕೊಂಡಿದ್ದರೆ, ಭಾರತದ ದಿಕ್ಕು ಬದಲಾಗುತ್ತಿತ್ತು.
 
ಮೀಸಲಾತಿಗಾಗಿ ಕಾಯುವ ಅನಿವಾರ್ಯತೆ ಇರುತ್ತಿರಲಿಲ್ಲ ಎಂದರು.ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ದಸಂಸ ತಾಲ್ಲೂಕು ಸಂಚಾಲಕ ಕೆಂಗುಂಟೆ ಜಯಪ್ಪ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಜೆ. ರಂಗಸ್ವಾಮಿ, ಇಂದಿರಾ ಕಿರಣ, ಪ.ಪಂ. ಅಧ್ಯಕ್ಷೆ ಗೀತಾ ಕೃಷ್ಣಮೂರ್ತಿ, ಕೆ.ಎಂ. ಲಿಂಗರಾಜು, ಚನ್ನಕೇಶವ, ಸರೋಜಾ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ನಾಗರಾಜ್, ಓಂಕಾರಸ್ವಾಮಿ, ದಸಂಸ ಸಂಘಟನಾ ಸಂಚಾಲಕ ಪಾಂಡುರಂಗಸ್ವಾಮಿ, ಕಸ್ತೂರಪ್ಪ, ರವೀಂದ್ರ, ಮಂಜುನಾಥ್, ರಮೇಶ್, ಡಾ.ಎನ್.ಬಿ. ಸಜ್ಜನ್, ಆನಂದಮೂರ್ತಿ, ಪ್ರಭಾಕರ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.