ಚಿತ್ರದುರ್ಗ: ಪ್ರಚಲಿತ ವಿದ್ಯಮಾನಗಳ ತಿಳಿವಳಿಕೆಗೆ ಸರ್ಕಾರ ಪಿಯು ಉಪನ್ಯಾಸಕರಿಗಾಗಿ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಒತ್ತಾಯಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇತಿಹಾಸ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಶಿಕ್ಷಣ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿ ಕೇಂದ್ರದಲ್ಲಿ ಒಂದು ವರ್ಷದಲ್ಲಿ 4 ಬಾರಿ ಉಪನ್ಯಾಸಕರಿಗೆ ಪುನರ್‌ಮನನ ಕಾರ್ಯಕ್ರಮ ಆಯೋಜಿಸಬೇಕು. ಹೊಸದಾಗಿ ನೇಮಕಗೊಂಡ ಉಪನ್ಯಾಸಕರಿಗೂ ಪ್ರಚಲಿತ ವಿದ್ಯಾಮಾನಗಳ ತರಬೇತಿ ನೀಡುವುದರಿಂದ ಬೋಧನೆಗೆ ಹೆಚ್ಚಿನ ಸಹಕಾರಿಯಾಗಲಿದೆ. ಇಲ್ಲದಿದ್ದರೇ ಮಕ್ಕಳು ಕೇಳುವ ಪ್ರಶ್ನೆಗೆ ಉತ್ತರಿಸಲು ಪರದಾಡಬೇಕಾಗುತ್ತದೆ ಎಂದರು.
ಇತಿಹಾಸಕ್ಕೆ ತನ್ನದೇ ಪರಂಪರೆಯಿದ್ದು, ಮಾನವನಿಗೆ ಸಂಬಂಧಿಸಿದ ವಿಷಯವಾಗಿದೆ. ಒಳ ಗರ್ಭದಲ್ಲಿರುವ ವಿಷಯಗಳ ಬಗ್ಗೆ ಇತಿಹಾಸ ತಜ್ಞರು ಸಂಶೋಧನೆ ನಡೆಸಿ ಜನರಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ಪದವಿಪೂರ್ವ ಉಪನ್ಯಾಸಕರ ವೇತನದ ವರದಿಯನ್ನು ಮುಖ್ಯಮಂತ್ರಿ ಯಥಾವತ್ತಾಗಿ ಜಾರಿಗೊಳಿಸಬೇಕು, ಪದವಿ ಹಾಗೂ ಪದವಿಪೂರ್ವ ಉಪನ್ಯಾಸಕರ ವೇತನ ಅಂತರ ಕಡಿಮೆಗೊಳಿಸಿ ಸಮಾನ ವೇತನ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಬಹುತೇಕ ಪದವಿಪೂರ್ವ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲದೇ ಪ್ರೌಢಶಾಲಾ ಕಟ್ಟಡಗಳಲ್ಲಿ ಕಾಲೇಜು ನಡೆಸಲಾಗುತ್ತಿದೆ. ಸರ್ಕಾರ ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ವಿವಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ.ವಿ. ವಸು ಉಪನ್ಯಾಸ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್. ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಜಗದೀಶ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿದರು. ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯಾದವರೆಡ್ಡಿ, ಪ್ರಾಂಶುಪಾಲ ಸಂಘದ ಅಧ್ಯಕ್ಷ ಶಿವಮೂರ್ತಿ, ನಿವೃತ್ತ ಉಪನ್ಯಾಸಕ ಕೋಟ್ರಬಸಪ್ಪ ಹಾಜರಿದ್ದರು.
ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇತಿಹಾಸ ವೇದಿಕೆ ಅಧ್ಯಕ್ಷ ಎಸ್.ಜಿ. ಬೋರಯ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ. ಕೃಷ್ಣಪ್ಪ ನಿರೂಪಿಸಿದರು. ಖಜಾಂಚಿ ಎಚ್.ಎಸ್. ಮೈಲಾರಲಿಂಗಂ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.