ADVERTISEMENT

ತಾಲ್ಲೂಕಿನಲ್ಲಿ ಸೈನಿಕ ಹುಳು ಬಾಧೆ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:05 IST
Last Updated 4 ಅಕ್ಟೋಬರ್ 2017, 6:05 IST
ಚಿಕ್ಕಜಾಜೂರು ಸಮೀಪದ ಬಾಣಗೆರೆ ಗ್ರಾಮದ ಗೌಡ್ರ ನಿತ್ಯಾನಂದ ಅವರ ಜಮೀನಿನಲ್ಲಿ ಹುಲುಸಾಗಿ ಬೆಳೆದಿರುವ ರಾಗಿ ಪೈರನ್ನು ಪರೀಕ್ಷಿಸುತ್ತಿರುವ ಕೃಷಿ ಸಹಾಯಕ ಅಧಿಕಾರಿ ರುದ್ರಪ್ಪ ಹಾಗೂ ಸುರೇಶ್‌.
ಚಿಕ್ಕಜಾಜೂರು ಸಮೀಪದ ಬಾಣಗೆರೆ ಗ್ರಾಮದ ಗೌಡ್ರ ನಿತ್ಯಾನಂದ ಅವರ ಜಮೀನಿನಲ್ಲಿ ಹುಲುಸಾಗಿ ಬೆಳೆದಿರುವ ರಾಗಿ ಪೈರನ್ನು ಪರೀಕ್ಷಿಸುತ್ತಿರುವ ಕೃಷಿ ಸಹಾಯಕ ಅಧಿಕಾರಿ ರುದ್ರಪ್ಪ ಹಾಗೂ ಸುರೇಶ್‌.   

ಚಿಕ್ಕಜಾಜೂರು: ದಾವಣಗೆರೆ, ಹೊಸದುರ್ಗ ಮೊದಲಾದ ತಾಲ್ಲೂಕುಗಳಲ್ಲಿ ರಾಗಿ, ಮೆಕ್ಕೆಜೋಳ ಮೊದಲಾದ ಬೆಳೆಗಳಿಗೆ ಸೈನಿಕ ಹುಳುಗಳ ಹಾವಳಿ ಕಂಡು ಬಂದಿ‌ದೆ. ಆದರೆ, ಹೊಳಲ್ಕೆರೆ ತಾಲ್ಲೂಕಿನ ರೈತರು ಆತಂಕ ಪಡುವ ಅಗತ್ಯವಿಲ್ಲ. ಈವರೆಗೂ ಈ ರೋಗ ಲಕ್ಷಣಗಳ ಬಗ್ಗೆ ರೈತರು ಯಾವುದೇ ದೂರು ನೀಡಿಲ್ಲ.  ತಾಲ್ಲೂಕಿನ ರೈತರು ಪೈರಿನ ಬಗ್ಗೆ ಗಮನ ಹರಿಸುವುದು ಸೂಕ್ತ ಎಂದು ಕೃಷಿ ಸಹಾಯಕ ನಿರ್ದೇಶಕ ಕೆಂಗೇಗೌಡ ತಿಳಿಸಿದ್ದಾರೆ.

ರಾಗಿ, ಜೋಳ, ಮೆಕ್ಕೆಜೋಳ, ನವಣೆ ಪೈರುಗಳಿಗೆ ಈ ಸೈನಿಕ ಹುಳುಗಳು ದಾಳಿ ಇಟ್ಟು, ಇಡೀ ವರ್ಷ ರೈತ ಮಾಡಿದ ಶ್ರಮವನ್ನು ವ್ಯರ್ಥಗೊಳಿಸುತ್ತಿವೆ. ಜಮೀನುಗಳಲ್ಲಿ ಇಂತಹ ಮರಿ ಹುಳುಗಳು ಕಂಡು ಬಂದಲ್ಲಿ ಕ್ಲೋರೋಪೈರಿಪಾಸ್‌ 20ಇಸಿ 2 ಮಿ.ಲೀ ಅಥವಾ ಕ್ವಿನಾಲ್‌ಪಾಸ್‌ 25ಇಸಿ 2 ಮಿ.ಲೀ ಅನ್ನು ಪ್ರತಿ ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದರು.

ಹುಳುಗಳು ದಪ್ಪವಾಗಿದ್ದಲ್ಲಿ, ಎಕರೆಗೆ 10 ಕೆ.ಜಿ.ಯಂತೆ ಅಕ್ಕಿ ತೌಡುನೊಂದಿಗೆ 1ಕೆ.ಜಿ. ಬೆಲ್ಲದ ಪುಡಿಯನ್ನು ಬೆರೆಸಿ, ಸ್ವಲ್ಪನೀರನ್ನು ಹಾಕಿ ಒಂದು ದಿನ ನೆನೆಸಬೇಕು. ಮಾರನೇ ದಿನ ಮಿಶ್ರಣಕ್ಕೆ 150 ಮಿ.ಲೀ. ಮೊನೋಕ್ರೋಟೋಪಾಸ್‌ 36 ಎಸ್‌ಎಲ್‌ನೊಂದಿಗೆ ಮಿಶ್ರಣ ಮಾಡಿ ಸಂಜೆ ವೇಳೆಯಲ್ಲಿ ಕೈಗೆ ಕೈಚೀಲ ಹಾಕಿಕೊಂಡು ಎರಚಬೇಕು ಇದರಿಂದ ಹುಳುಗಳನ್ನು ನಿಯಂತ್ರಿಸಬಹುದು.

ADVERTISEMENT

ಅಲ್ಲದೆ, ಹುಳುಗಳು ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಸಂಚರಿಸುವುದರಿಂದ ಜಮೀನಿನ ಸುತ್ತಲೂ ಪೆನ್ವಲರೇಟ್‌ 0.4ಡಿಪಿ ಅಥವಾ ಮೆಲಾಥಿಯಾನ್‌ 5% ಪುಡಿಯನ್ನು ಹಾಕುವುದರಿಂದ ರೋಗ ನಿಯಂತ್ರಣವನ್ನು ತಡೆಗಟ್ಟಬಹುದು ಎಂದು ಕೆಂಗೇಗೌಡ ತಿಳಿಸಿದರು.

ಬಿ. ದುರ್ಗ ಹೋಬಳಿ ವ್ಯಾಪ್ತಿಯ ರೈತರು ಜಮೀನುಗಳಲ್ಲಿ ಇಂತಹ ಹುಳುಗಳ ಬಗ್ಗೆ ಸುಳಿವು ಸಿಕ್ಕಲ್ಲಿ, ತಕ್ಷಣ ಚಿಕ್ಕಜಾಜೂರು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ರುದ್ರಪ್ಪ ಅವರನ್ನು ಸಂಪರ್ಕಿಸಬಹುದೆಂದು ಕೃಷಿ ಅಧಿಕಾರಿ ಚಂದ್ರಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.