ADVERTISEMENT

ತಿಪ್ಪೇರುದ್ರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 5:55 IST
Last Updated 27 ಏಪ್ರಿಲ್ 2012, 5:55 IST

ಮೊಳಕಾಲ್ಮುರು: ತಾಲ್ಲೂಕಿನ ಪ್ರಮುಖ ರಥೋತ್ಸವಗಳಲ್ಲಿ ಮುಖ್ಯವಾದ ಕೊಂಡ್ಲಹಳ್ಳಿಯ ಐತಿಹಾಸಿಕ ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರದಲ್ಲಿ ಗುರುವಾರ ಸಂಜೆ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವದಿಂದ ನೆರವೇರಿತು.

ಚಿತ್ರದರ್ಗ ಜಿಲ್ಲೆಯಲ್ಲಿ ನಾಯಕನಹಟ್ಟಿ ಪುಣ್ಯಕ್ಷೇತ್ರದಂತೆಯೇ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿರುವ ಈ ಕ್ಷೇತ್ರದಲ್ಲಿ ಇದು 18ನೇ ರಥೋತ್ಸವವಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಅವಧೂತರಾಗಿ ಜನಸೇವೆಯಲ್ಲಿ ನಿರತರಾಗಿದ್ದ ತಿಪ್ಪೇರುದ್ರಸ್ವಾಮಿಯನ್ನು ತಮ್ಮ ಕ್ಷೇತ್ರದಲ್ಲಿಯೂ ಸೇವೆ ಮಾಡಿ ಎಂಬ ಮನವಿಗೆ ಸ್ಪಂದಿಸಿ ಪಣಿಯಪ್ಪ ಜತೆಗೂಡಿ ನಾಯಕನಹಟ್ಟಿಗೆ ಹೋಗುವಾಗ ಮಾರ್ಗ ಮಧ್ಯೆ ಊಟಕ್ಕೆ ಕುಳಿತ ಸ್ಥಳ ಬಿಳಿನೀರು ಚಿಲುಮೆ ಎಂದು ಹೆಸರು ಪಡೆದಿದೆ ಎಂಬ ಇತಿಹಾಸ ಹೊಂದಿದೆ.

ರಥೋತ್ಸವ ಅಂಗವಾಗಿ ಏ. 19ರಿಂದ ಕಂಕಣಧಾರಣೆ ಮಹೋತ್ಸವ, ಸ್ವಸ್ತಿ ಪುಣ್ಯಾಹ ವಾಚನ, ಸರ್ಪ ವಾಹನೋತ್ಸವ, ಮಯೂರ ವಾಹನೋತ್ಸವ, ಗಜ ವಾಹನೋತ್ಸವ, ರಥಕ್ಕೆ ಕಳಸ ಸ್ಥಾಪನೆ, ಸಿಂಹ ವಾಹನೋತ್ಸವ, ಅಶ್ವ ವಾಹನೋತ್ಸವ, ರಥಕ್ಕೆ ತೈಲಾಭಿಷೇಕ ಮತ್ತಿತರ ಕಾರ್ಯಕ್ರಮಗಳು ನಡೆದವು.

ಗುರುವಾರ ಬೆಳಿಗ್ಗೆ ರುದ್ರಾಭಿಷೇಕ ನಂತರ ಮೊಗಲಹಳ್ಳಿಯಿಂದ ಬಂದ ಪಟ್ಟದ ಬಸವಣ್ಣನನ್ನು ಆಹ್ವಾನಿಸಲಾಯಿತು, ನಂತರ ಊಡೇವು ಗ್ರಾಮದಿಂದ ಬಂದ ಮುಕ್ತಿಧ್ವಜ ಆಹ್ವಾನ ನಂತರ ಬಲಿ ಅನ್ನ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ಮುಕ್ತಿಧ್ವಜ ಹರಾಜು ನಂತರ ಆರಂಭವಾದ ರಥೋತ್ಸವದಲ್ಲಿ ರಥ ಪಾದಗಟ್ಟೆಯಿಂದ ದೇವಸ್ಥಾನದವರೆಗೆ ಸಾಗಿ ವಾಪಾಸ್ ಬಂದಿತು. ಡೊಳ್ಳುಕುಣಿತ, ನಂದಿಕೋಲು ಕುಣಿತ, ವಿವಿಧ ವೇಷಧಾರಿಗಳು, ಹೂವಿನ ಹಾರಗಳ ಸಮರ್ಪಣೆ, ಸೂರುಬೆಲ್ಲ, ಬಾಳೆಹಣ್ಣು ಸಮರ್ಪಣೆ ನೋಡುಗರ ಗಮನ ಸೆಳೆದವು.

ಜನಮುಖಿ ಸೇವಾ ಸಂಘ ಪ್ರಸಾದ ಸೇವೆ ಹಮ್ಮಿಕೊಂಡಿತ್ತು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್.ಟಿ. ನಾಗರೆಡ್ಡಿ, ಮಾರಕ್ಕ ಓಬಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಕೆ. ಗುರುಲಿಂಗಪ್ಪ ಭಾಗವಹಿಸಿದ್ದರು.
27ರಂದು ವಸಂತೋತ್ಸವ, 30ರಂದು ಮರಿಪರಿಷೆ, ಹೂವಿನ ಪಲ್ಲಕ್ಕಿ ಮಹೋತ್ಸವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.