ADVERTISEMENT

ದಾಳಿಂಬೆ: ರೋಗಗಳ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 8:20 IST
Last Updated 11 ಜನವರಿ 2012, 8:20 IST

ಹಿರಿಯೂರು: ದಾಳಿಂಬೆ ಇಂದು ಅತ್ಯಂತ ಬೇಡಿಕೆಯ ಹಣ್ಣು. ದಾಳಿಂಬೆ ಬೆಳೆಯುವ ರೈತರು ಮೊದಲು ಬೆಳೆಯಲ್ಲಿನ ತಳಿಗಳ ಬಗ್ಗೆ ತಿಳಿಯಬೇಕು. ಮೃದುಲಾ, ಅರಕ್ತಾ, ಭಗವ, ಜ್ಯೋತಿ ತಳಿ ಲಾಭದಾಯಕ. ರೂಬಿ ತಳಿಗೆ ರೋಗ ಹೆಚ್ಚು. ಯೋಚಿಸಿ ಹೆಜ್ಜೆಯಿಡಿ ಎಂದು ಮಹಾರಾಷ್ಟ್ರದ ತೋಟಗಾರಿಕೆ ತಜ್ಞ ಡಾ.ವಿನಯ್‌ಸುಪೆ ತಿಳಿಸಿದರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಮಹಾ ವಿದ್ಯಾಲಯ, ಪ್ರಾದೇಶಿಕ ತೋಟಗಾರಿಕೆ  ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಮತ್ತು ಅಕ್ಷಯ ಫುಡ್‌ಪಾರ್ಕ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  `ಸುಧಾರಿತ ದಾಳಿಂಬೆ ಕೃಷಿ ವಿಧಾನ ಕುರಿತು ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ `ಸಸ್ಯಾಗಾರ ಮತ್ತು ಗಿಡಗಳ ಸವರುವಿಕೆ~ ವಿಚಾರ ಕುರಿತು ಅವರು ಮಾತನಾಡಿದರು.
ವಾಣಿಜ್ಯ ಬೆಳೆಯಾಗಿರುವ ದಾಳಿಂಬೆ ವಾಸ್ತವವಾಗಿ ಭಾರತದ ಬೆಳೆಯಲ್ಲ. ಇರಾನ್ ದೇಶದ್ದು.
 
ಉತ್ತರ ಭಾರತದಿಂದ ಮಹಾರಾಷ್ಟ್ರ, ತಮಿಳುನಾಡು ಮೂಲಕ ಕರ್ನಾಟಕಕ್ಕೆ ಬಂದಿದೆ. ನಮ್ಮ ದೇಶದ ದಾಳಿಂಬೆ ಉತ್ಕೃಷ್ಟ ಗುಣಮಟ್ಟದಿಂದ ಕೂಡಿರುವ ಕಾರಣ ಜಾಗತಿಕಮಟ್ಟದಲ್ಲಿ ಬೇಡಿಕೆಯಿದೆ. ಉಷ್ಣತೆಯಲ್ಲಿ ಬೆಳೆಯುವ ಬೆಳೆ ಇದಾಗಿದ್ದು, ಬೇಸಿಗೆಯಲ್ಲಿ ಬೆಳೆಯಬೇಕು. ಮಲೆನಾಡು ಹೊರತುಪಡಿಸಿ, ಇತರೆ ಒಣಭೂಮಿಯಲ್ಲಿ  ಬೆಳೆಯುವುದು ಸೂಕ್ತ ಎಂದು ಅವರು ಹೇಳಿದರು.

ದಾಳಿಂಬೆ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ರಾಜ್ಯದ ಚಿತ್ರದುರ್ಗ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬಿಜಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸುಮಾರು 15 ಸಾವಿರ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಇದರಲ್ಲಿ ಹಲವು ಔಷಧೀಯ ಗುಣಗಳು, ಜೀವ ಸತ್ವಗಳು ವಿಫುಲವಾಗಿವೆ, ಗಣೇಶ ತಳಿ ಇಳುವರಿ ಹೆಚ್ಚು.

ಹಾಗೆಯೇ ಜಿ-137, ಮೃದುಲಾ, ಭಗವ ತಳಿಗಳ ಕಾಳುಗಳು ಹೆಚ್ಚು ಕೆಂಪಿರುವ ಕಾರಣ ಬೇಡಿಕೆ ಹೆಚ್ಚು. ರೂಬಿ ತಳಿ ಬೇಗ ಫಸಲು ಕೊಟ್ಟರೂ ರೋಗ ಹೆಚ್ಚು. ಹೀಗಾಗಿ ಈ ತಳಿ ಬೇಡ. ಸಸಿಗಳ ಆಯ್ಕೆ ಮಾಡುವಾಗ ಎಚ್ಚರದಿಂದಿರಬೇಕು. ರೋಗಪೀಡಿತ ಪ್ರದೇಶದಿಂದ ಸಸಿ ತರಬಾರದು. ವಿಜ್ಞಾನಿಗಳ ಸಲಹೆ ಪಡೆಯದೆ ಸಸಿ ಖರೀದಿಸಬಾರದು ಎಂದು  ವಿನಯ್ ಸಲಹೆ ಮಾಡಿದರು.

`ರೋಗಗಳ ನಿರ್ವಹಣೆ~ ಕುರಿತು ಮಾತನಾಡಿದ ಬೆಂಗಳೂರಿನ ನಿವೃತ್ತ ವಿಜ್ಞಾನಿ ಡಾ.ಆರ್.ಡಿ. ರಾವಲ್ ಅವರು, ದಾಳಿಂಬೆ ಬೆಳೆಗೆ ಪ್ರಮುಖವಾಗಿ ಬ್ಯಾಕ್ಟೀರಿಯಾದ ಅಂಗಮಾರಿ ರೋಗ, ಒಣರೋಗ, ಚಿಬ್ಬುರೋಗ, ಕಾಯಿ ಬಿರಿಯುವಿಕೆ ಸಮಸ್ಯೆ ಕಂಡುಬರುವುದುಂಟು. ಮಳೆಗಾಲದಲ್ಲಿ ರೋಗಗಳು ಕಾಣಿಸಿಕೊಳ್ಳುವುದು ಹೆಚ್ಚು. ರೋಗ ಕಾಣಿಸಿಕೊಳ್ಳುತ್ತಿದ್ದಂತೆ ತಜ್ಞರ ಸಲಹೆ ಪಡೆದು ನಿಯಂತ್ರಣ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.
`ಪೋಷಕಾಂಶಗಳ ವಿಶ್ಲೇಷಣೆ ಮತ್ತು ನಿರ್ವಹಣೆ~ ಕುರಿತು ಬೆಂಗಳೂರಿನ ಡಾ.ಪಳನಿಯಪ್ಪನ್, `ನೀರಾವರಿ ನಿರ್ವಹಣೆ~ ಕುರಿತು ಬೆಂಗಳೂರಿನ ಸಂಗಮೇಶ್ ಬೋಗಶೆಟ್ಟಿ ಮಾಹಿತಿ ನೀಡಿದರು.

ನಗರದ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಪಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಡಾ.ಹಳ್ಳಿಕೇರಿ, ಬೃಂದಾ, ಡಾ.ವೀರಭದ್ರಯ್ಯ, ಡಾ.ಹನುಮಂತರೆಡ್ಡಿ, ಡಾ.ಪ್ರಕಾಶ್‌ಭಂಡಾರಿ, ವಿನಯ್ ಸುಪೆ, ಡಾ.ಪ್ರಕಾಶ್ ಕುಲಕರ್ಣಿ, ಜಿ. ಗುರುಸಿದ್ದಯ್ಯ, ಡಾ.ಕೃಷ್ಣಮೂರ್ತಿ, ಬಿ.ಆರ್. ನಾಗಭೂಷಣರೆಡ್ಡಿ, ಪಿ.ವಿ. ವಿಜಯ ಕುಮಾರ್, ಡಾ.ಎಚ್. ಚಂದ್ರಪ್ಪ, ಕೆ.ಟಿ. ರಾಜೇಂದ್ರ ಪ್ರಸಾದ್, ಕೆ.ಎಚ್. ಸೀತಾರಾಮ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಕೃಷಿಕರ ಸಮಾಜ ಆಕ್ಷೇಪ:  ದಾಳಿಂಬೆ ಬೆಳೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಪರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೆರವಿಗೆ ಬರುವಂತೆ ಹೋರಾಟ ನಡೆಸುತ್ತಿರುವ ತಾಲ್ಲೂಕು ಕೃಷಿಕ ಸಮಾಜ ಮತ್ತು ತೋಟಗಾರಿಕೆ ಬೆಳೆಗಾರರ ಸಲಹಾ ಸಮಿತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಇರುವುದು ಸರಿಯಲ್ಲ ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿ ರಾಜಕೀಯ ತರುವುದು ಬೇಡ. ಈಗ ನಡೆಯುತ್ತಿರುವ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ದಾಳಿಂಬೆ ಬೆಳೆಗಾರ ಕೆ.ಟಿ. ತಿಪ್ಪೇಸ್ವಾಮಿ ಪ್ರತಿ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.