ADVERTISEMENT

ದಾಳಿಂಬೆ: ರೋಗ ನಿಯಂತ್ರಣಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 5:50 IST
Last Updated 26 ಮಾರ್ಚ್ 2012, 5:50 IST

ಹೊಸದುರ್ಗ: ದಾಳಿಂಬೆ ಬೆಳೆಗೆ ತಗುಲುವ ರೋಗಗಳನ್ನು ನಿಯಂತ್ರಣಕ್ಕೆ ತಾರದೆ ಹೋದಲ್ಲಿ ರೈತರು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ ಎಂದು ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಹೇಳಿದರು.

ತಾಲ್ಲೂಕಿನ ಮಾಡದಕರೆ ಹೋಬಳಿ ಅತ್ತಿಮಗೆ ಗ್ರಾಮದಲ್ಲಿ ದಾಳಿಂಬೆ ಬೆಳೆಗಾರರು, ತೋಟಗಾರಿಕೆ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ದಾಳಿಂಬೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆಗೆ ಮಾರಕ ದುಂಡಾಣು ಅಂಗಮಾರಿ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ತೋಟಗಾರಿಕೆ ತಜ್ಞರು ಹಾಗೂ ವಿಜ್ಞಾನಿಗಳು ನೀಡಿರುವ ಸಲಹೆಗಳನ್ನು ಪಾಲಿಸುವುದರ ಜತೆಗೆ ಅಗತ್ಯ ಔಷಧಿ ಸಿಂಪಡಿಸುವ ಮೂಲಕ ರೋಗ ವ್ಯಾಪಿಸದಂತೆ ತಡೆಯಬೇಕು ಎಂದು ಹೇಳಿದರು.

ದಾಳಿಂಬೆ ಬೆಳೆಯುವ ಮುನ್ನ ಬೆಳೆಗಾರರು ಉದ್ದೇಶಿತ ಜಮೀನಿನ ಮಣ್ಣು ಮತ್ತು ನೀರನ್ನು ಪರೀಕ್ಷೆ ಮಾಡಿಸಬೇಕು. ಅನುಭವಿ ತಜ್ಞರ ಸಲಹೆ ಪಡೆದು ಉತ್ತಮ ಗುಣಮಟ್ಟದ ಸಸಿಗಳನ್ನು ನಾಟಿ ಮಾಡಿ ಕ್ರಮಬದ್ಧವಾಗಿ ಗಿಡಗಳ ಆರೈಕೆ ಮಾಡಬೇಕು ಎಂದು ತಿಳಿಸಿದರು.

ದಾಳಿಂಬೆ ಬೆಳೆಗೆ ಪ್ರೋತ್ಸಾಹ ನೀಡಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ಸಬ್ಸಿಡಿ ನೀಡುತ್ತಿದೆ. ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಲಾಭದಾಯಕವಾಗಿ ಬೆಳೆ ಬೆಳೆಯಬೇಕು ಎಂದು ಹೇಳಿದರು.

ದಾಳಿಂಬೆ ತಜ್ಞ ಶ್ರೀನಿವಾಸ್‌ರಾಜು ಮಾತನಾಡಿ, ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆಗೆ ಸೂಕ್ತವಾದ ವಾತಾವರಣ ಇದೆ. ಜತೆಗೆ ಭೂಮಿಯೂ ಫಲವತ್ತಾಗಿದೆ. ರೈತರು ಗಿಡಗಳನ್ನು ಉತ್ತಮವಾಗಿ ಆರೈಕೆ ಮಾಡಿ ಅಧಿಕ ಫಸಲು ಪಡೆದು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಗಳಿಸಬೇಕು ಎಂದು ಸಲಹೆ ಮಾಡಿದರು.

ನಿವೃತ್ತ ಶಿಕ್ಷಕ ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಅರ್. ಹನುಮಂತಪ್ಪ. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗಮೂರ್ತಿ, ಹಿರಿಯ ದಾಳಿಂಬೆ ಬೆಳೆಗಾರ ಎಚ್.ಆರ್. ಕಲ್ಲೇಶ್, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಹೆಬ್ಬಳ್ಳಿ  ನಾಗರಾಜ್, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.