ಚಳ್ಳಕೆರೆ: ಪರಂಪರೆಯಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ಬುಡಕಟ್ಟು ಜನರ ವಿಶಿಷ್ಟ ನಂಬಿಕೆಯಂತೆ ಚಳ್ಳಕೆರೆಯಮ್ಮನ ದೊಡ್ಡ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಸಂಪ್ರದಾಯದಂತೆ `ತಾಳಿಭಾಗ್ಯ~ವನ್ನು ಮದಕರಿ ವಂಶಸ್ಥರು ನೆರವೇರಿಸಿ ಕೊಟ್ಟರು.
ಮೂಲತಃ ದೊಡ್ಡೇರಿಯಲ್ಲಿ ನೆಲೆಸಿದ್ದ ಚಳ್ಳಕೆರೆಯಮ್ಮ ಚಳ್ಳಕೆರೆಗೆ ಬಂದು ನೆಲೆಸಿದ ಮೇಲೆ ಪ್ರತೀ ಜಾತ್ರೆಯ ಸಂದರ್ಭದಲ್ಲೂ ದೊಡ್ಡೇರಿ ಹಳ್ಳದಲ್ಲಿ ಗಂಗಾ ಪೂಜೆಗೆ ಹೋಗಿಬರುವುದು ವಾಡಿಕೆಯಾಗಿದೆ. ಚಳ್ಳಕೆರೆ ಪಕ್ಕದಲ್ಲಿ ಅನೇಕ ಹಳ್ಳ, ಹೊಳೆಗಳು ಇದ್ದರೂ ದೊಡ್ಡೇರಿ ಈಕೆಯ ತವರು ಮನೆಯಾಗಿದೆ ಎಂದೇ ಹೇಳುವ ಪ್ರತೀತಿ ಇಲ್ಲಿನದು.
ಗಂಡನನ್ನು ಕಳೆದುಕೊಂಡ ದೇವಿ ವಿಧವೆಯ ಪಟ್ಟದಲ್ಲಿರುತ್ತಾಳೆ. ಅದ್ದರಿಂದ ಈಕೆಯನ್ನು ಆರಾಧ್ಯ ದೇವತೆ ಎಂದು ಆರಾಧಿಸುವ ಭಕ್ತರು ಈಕೆಗೆ ಮಾಂಗಲ್ಯ ಧಾರಣೆ ಮಾಡುವುದನ್ನು ನಡೆಸಿಕೊಂಡು ಬಂದಿದ್ದಾರೆ. ಈಕೆಗೆ ತಾಳಿಭಾಗ್ಯ ನೀಡುವವರು ಚಳ್ಳಕೆರೆಯ ಕಾಟಪ್ಪನಹಟ್ಟಿಯಲ್ಲಿರುವ ದೊಡ್ಡ ಮದಕರಿ ನಾಯಕರ ವಂಶಸ್ಥರಾದ ಪಿ.ಆರ್. ವೀರಭದ್ರನಾಯಕರ ಮನೆವರು. ಇದು ಪಾಳೆಯಗಾರರಿಗೂ ಮತ್ತು ಚಳ್ಳಕೆರೆಯಮ್ಮನಿಗೂ ಇರುವ ಪ್ರಾಚೀನ ಸಂಬಂಧವನ್ನು ಸೂಚಿಸುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ತಾಳಿಭಾಗ್ಯ ನೀಡಿದ ಮೇಲೆ ಮುತ್ತೈದೆ ಹೆಂಗಳೆಯರು ಹಸಿರು ಬಳೆ, ಕುಂಕುಮ, ತಾಳಿ ಮುಂತಾದುವುಗಳನ್ನು ವಾದ್ಯ,ಮೇಳಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಇಂತಹ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟ ಆಚರಣೆ ಅನಾದಿ ಕಾಲದಿಂದಲೂ ಇಲ್ಲಿ ನಡೆದು ಕೊಂಡು ಬಂದ ಸಂಪ್ರದಾಯವಾಗಿ ಇಂದಿಗೂ ಮುಂದುವರೆಯುತ್ತಿದೆ.
ಮಂಗಳವಾರ ರಾತ್ರಿ ದೇವಿಗೆ ತಾಳಿಭಾಗ್ಯ ನೀಡಿದ ಮೇಲೆ ಸಹಸ್ರಾರು ಹೆಂಗಳೆಯರು, ಮಕ್ಕಳು ಎನ್ನದೇ ಭಕ್ತರ ದಂಡೇ ದೇಗುಲದ ಮುಂದೆ ನೆರೆದು ದೇವಿಯ ದರ್ಶನ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.