ADVERTISEMENT

ದೇಶಕ್ಕಾಗಿ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್‌

ಬಹಿರಂಗ ಸಭೆಯಲ್ಲಿ ಸಚಿವ ಎಚ್‌.ಆಂಜನೇಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 5:46 IST
Last Updated 17 ಮಾರ್ಚ್ 2014, 5:46 IST

ಚಿತ್ರದುರ್ಗ: ದೇಶದ ಒಳಿತಿಗಾಗಿ ಪ್ರಾಣತ್ಯಾಗ ಮಾಡಿದ ಇತಿಹಾಸ ಕಾಂಗ್ರೆಸ್‌ದಾದರೆ, ಅದರ ವಿರುದ್ಧದ ಇತಿಹಾಸ ಬಿಜೆಪಿಯದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ಅಭಿಪ್ರಾಯಪಟ್ಟರು.

ನಗರದ ಗಾಂಧಿ ವೃತ್ತದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ನಗರ ಮತ್ತು ಗ್ರಾಮಾಂತರ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಭಾರತ ನಿರ್ಮಾಣ ಪಾದಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋಮುವಾದಿ ಬಿಜೆಪಿಗೆ ಅಧಿಕಾರ ನೀಡಿದರೆ, ಧರ್ಮಗಳ ನಡುವೆ ಕಿಚ್ಚು ಹಚ್ಚಿ ದೇಶವನ್ನುಛಿದ್ರ ಮಾಡುತ್ತಾರೆ. ಅದಕ್ಕಾಗಿ ಬಿಜೆಪಿ ಸಹವಾಸ ಸಾಕು ಕಾಂಗ್ರೆಸ್ ಬೇಕು ಎನ್ನುವುದಾದರೆ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಈ ಕ್ಷೇತ್ರದ ಅಭ್ಯರ್ಥಿ ಗೆಲ್ಲಿಸಬೇಕು ಎಂದರು.

ಹಸಿವು ಮುಕ್ತ ಭಾರತ ನಿರ್ಮಾಣಕ್ಕಾಗಿ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂದಿದೆ. ಬಿಜೆಪಿ ಸರ್ಕಾರ ಕೇವಲ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್‌ ಚಿತ್ರದುರ್ಗದ ಕೋಟೆಯಷ್ಟೆ ಭದ್ರವಾಗಿದೆ ಎಂಬುದನ್ನು ಸಾಬೀತು ಪಡಿಸಲು ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದು ಹೇಳಿದರು.

ಜಿಲ್ಲೆಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಹೈಕಮಾಂಡ್ ಚಂದ್ರಪ್ಪ ಅವರಿಗೆ ಟಿಕೆಟ್‌ ನೀಡಿದ್ದು, ಯಾರ ಅಪಸ್ವರವಿಲ್ಲ. ಪಕ್ಷ ವಿರೋಧಿಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಬಂಡಾಯಗಾರರನ್ನು ಎಚ್ಚರಿಸಿದ ಅವರು, ಜನರ ಮನಸ್ಸನ್ನು ಗೆಲ್ಲುವ
ಕೆಲಸ ಕಾರ್ಯಕರ್ತರು ಮಾಡುವ ಮೂಲಕ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪ ಮಾತನಾಡಿ, ‘ನಾನು ಹೊರಗಿನವನು ಎಂದು ಯಾರು ಭಾವಿಸಬೇಡಿ.  ವಿರೋಧಿಗಳ ಮಾತಿಗೆ ಮಣೆ ಹಾಕದೆ, ಒಗ್ಗಟ್ಟಿನಿಂದ ನನ್ನನ್ನು ಗೆಲ್ಲಿಸಿದರೆ ನಿಮ್ಮ ಋಣ ತೀರಿಸುತ್ತೇನೆ’ ಎಂದು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎ.ಸೇತುರಾಂ ಅಧ್ಯಕ್ಷತೆ ವಹಿಸಿದ್ದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿ.ಎಸ್.ಮಂಜುನಾಥ್, ಭೀಮಸಮುದ್ರದ ಜಿ.ಎಸ್.ಮಂಜುನಾಥ್, ನೀರಾವರಿ ಹೋರಾಟ ಸಮಿತಿಯ ಎಂ.ಜಯಣ್ಣ, ನಜ್ಮತಾಜ್, ಶಬ್ಬೀರ್ ಅಹಮದ್, ಬಿ.ಟಿ.ಜಗದೀಶ್, ಯೋಗೇಶ್‌ ಬಾಬು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಣ್ಣತಿಮ್ಮಕ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.