ADVERTISEMENT

ದ್ವೇಷ ರಾಜಕಾರಣ ಕೈಬಿಡಲು ಸುಧಾಕರ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 5:09 IST
Last Updated 1 ಜುಲೈ 2013, 5:09 IST

ಹಿರಿಯೂರು: 2008 ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ವಿಧಾನ ಸಭಾ ಸದಸ್ಯರಾಗಿದ್ದ ಡಿ. ಸುಧಾಕರ್ ಅವರು ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿಗೆ ಹಿರಿಯೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಇನ್ನಾದರೂ ಪಕ್ಷ ನಿಷ್ಠೆ ಉಳಿಸಿಕೊಂಡು, ದ್ವೇಷ ರಾಜಕಾರಣ ನಡೆಸುವುದನ್ನು ಕೈಬಿಡಬೇಕು ಎಂದು ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ಇರುವ ಶ್ರೀವಾರು ಶ್ರೀನಿವಾಸ್ ತೋಟದಲ್ಲಿ ಭಾನುವಾರ ಮೂಲ ಕಾಂಗ್ರೆಸ್ಸಿಗರ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.

ಹಿಂದಿನ 35-40 ವರ್ಷಗಳಿಂದ ಪಕ್ಷವನ್ನು ಸಂಘಟಿಸಲು ಹಗಲಿರುಳು ಶ್ರಮಿಸಿದ್ದ ಸ್ಥಳೀಯ ಮುಖಂಡರಿಗೆ ದಕ್ಕಬೇಕಿದ್ದ ವಿಧಾನಸಭಾ ಸ್ಥಾನವನ್ನು ತಪ್ಪಿಸಿ, ಸಂಘಟನೆಯ ಲಾಭವನ್ನು ಶಾಸಕರು ಮಾಡಿಕೊಂಡಿದ್ದಾರೆ. ವಿಧಾನ ಸಭೆ ಚುನಾವಣೆಗಿಂತ ಮುಂಚೆ ನಡೆದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸಿ, ಪಕ್ಷದ ಸೋಲಿಗೆ ಕಾರಣರಾಗಿದ್ದಾರೆ. ಶೀಘ್ರದಲ್ಲಿಯೇ ವಿಧಾನಪರಿಷತ್ ಮತ್ತು ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಪಕ್ಷ ಹೋಳಾಗದಂತೆ ಶಾಸಕರು ಎಚ್ಚರವಹಿಸಬೇಕಿದೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಸತತ ಐದು ವರ್ಷ ಹೋರಾಟ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕರು ಕಿಂಚಿತ್ತೂ ಗೌರವ ಕೊಡುತ್ತಿಲ್ಲ. ಮೂಲ ಕಾಂಗ್ರೆಸ್ಸಿಗರ ಜತೆ ಸಮನ್ವಯತೆ ಸಾಧಿಸಿಕೊಂಡಲ್ಲಿ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯ. ಇದು ವಿರೋಧಿ ಬಣದ ಸಭೆಯಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷ ಉಳಿಯಬೇಕು ಎಂಬ ಕಳಕಳಿಯಿಂದ ಇಂತಹ ಒತ್ತಾಯ ಮಾಡುತ್ತಿದ್ದೇವೆ ಎಂದು ಮುಖಂಡರು ಸ್ಪಷ್ಟಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎನ್.ನರಸಿಂಹಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಬಿ.ಕೆಂಚಪ್ಪ, ಕೆ.ಟಿ.ರುದ್ರಮುನಿ, ಎಸ್.ಆರ್.ತಿಪ್ಪೇಸ್ವಾಮಿ, ಜಿ.ಧನಂಜಯ ಕುಮಾರ್, ಕೆ.ಆರ್.ವೆಂಕಟೇಶ್, ಮಂಜುಳಾವೆಂಕಟೇಶ್, ಆರ್. ವಾಸುದೇವ್, ಎಚ್.ಕೆ.ದಿವಾಕರ ನಾಯಕ್, ಎಚ್.ಆರ್.ತಿಮ್ಮಯ್ಯ, ಸೀಗೆಹಟ್ಟಿ ದಾಸಪ್ಪ,ಪಿ.ಎಸ್. ಪಾತಯ್ಯ, ಉಮೇಶ್, ದಯಾನಂದ್, ಕರ್ಣ ಮತ್ತಿತರರು ಮಾತನಾಡಿದರು.
ಹೊಳಲ್ಕೆರೆ ಕ್ಷೇತ್ರದ ಶಾಸಕ ಎಚ್.ಆಂಜನೇಯ ಅವರಿಗೆ ಸಂಪುಟದರ್ಜೆ ಸಚಿವಸ್ಥಾನ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಯಿತು.

ಕೆ.ಸಿ.ಹೊರಕೇರಪ್ಪ, ಎಂ.ವಿ. ಚನ್ನಯ್ಯ, ಡಿ.ಸಿ.ಪಾಣಿ, ಅಷ್ವಕ್‌ಅಹಮದ್, ಅತಾವುಲ್ಲಾ, ಹುಬ್ಳಿ ಮಹಲಿಂಗಪ್ಪ, ಚಿತ್ರಲಿಂಗಸ್ವಾಮಿ, ತ್ಯಾರನಾಯಕ, ಹನುಮಂತರಾಯ, ಟಿ. ತಿಮ್ಮಪ್ಪ, ಶ್ರೀವಾರು ಶ್ರೀನಿವಾಸ್, ಎ. ಪಾಂಡುರಂಗ, ಬುರುಡುಕುಂಟೆ ಮಂಜುನಾಥ್, ಸೊಂಡೆಕೆರೆ ಶ್ರೀನಿವಾಸ್, ಸುಬ್ರಮಣ್ಯಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.