ADVERTISEMENT

ನನೆಗುದಿಗೆ ಬಿದ್ದ `ಸುವರ್ಣ ಗ್ರಾಮ' ಯೋಜನೆ

ಭೂಸೇನಾ ನಿಗಮ ಮತ್ತು ಗ್ರಾಮ ಪಂಚಾಯ್ತಿ ಮಧ್ಯೆ ಸಮನ್ವಯ ಕೊರತೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 7:00 IST
Last Updated 12 ಡಿಸೆಂಬರ್ 2012, 7:00 IST

ಮೊಳಕಾಲ್ಮುರು: ಗ್ರಾಮಗಳ ಪೂರ್ಣ ಅಭಿವೃದ್ಧಿ ಉದ್ದೇಶವಿಟ್ಟುಕೊಂಡು ಜಾರಿಗೆ ತಂದಿರುವ `ಸುವರ್ಣ ಗ್ರಾಮ' ಯೋಜನೆ ತಾಲ್ಲೂಕಿನ ನಾಗಸಮುದ್ರದಲ್ಲಿ ಮಾತ್ರ ವಾಮ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.
ಗ್ರಾಮದಲ್ಲಿ ರಸ್ತೆ, ಚರಂಡಿ, ಸಮುದಾಯ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಸುವರ್ಣಗ್ರಾಮ ಯೋಜನೆ ಜಾರಿಗೆ ತರಲಾಗಿದೆ. ನಾಗಸಮುದ್ರ ಗ್ರಾಮಕ್ಕೆ 2010-11ನೇ ಸಾಲಿನಲ್ಲಿರೂ 108 ಲಕ್ಷ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗಿದ್ದು, ಅವಧಿ ಪೂರ್ಣಗೊಂಡಿದ್ದರೂ ಇನ್ನೂ ಕಾಮಗಾರಿಗಳು ಆರಂಭವಾಗದೇ ಇರುವುದು ಗ್ರಾಮಸ್ಥರ ಅಸಮಧಾನಕ್ಕೆ ಕಾರಣವಾಗಿದೆ.

ಯೋಜನೆ ಅನುಷ್ಠಾನವನ್ನು ಭೂಸೇನಾ ನಿಗಮ ಹೊತ್ತಿದೆ. ನಿಗಮದ ಎಂಜಿನಿಯರ್ ಉಮೇಶ್ ಸೋಮವಾರ ಮಾಹಿತಿ ನೀಡಿ,ರೂ 108 ಲಕ್ಷ ಪೈಕಿರೂ 71 ಲಕ್ಷವನ್ನು ರಸ್ತೆ ಕಾಮಗಾರಿಗೆ ಮತ್ತುರೂ 27 ಲಕ್ಷ ಚರಂಡಿ ಕಾಮಗಾರಿಗೆ ಮೀಸಲಿಡಲಾಗಿತ್ತು. ಒಟ್ಟು 15 ಕಾಮಗಾರಿಗಳನ್ನು ಗುರುತಿಸಲಾಗಿತ್ತು. ಪ್ರಸ್ತುತರೂ 41 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳು ಹಾಗೂರೂ 9 ಲಕ್ಷ ವೆಚ್ಚದ ಚರಂಡಿ ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಅಂದಾಜುರೂ 58 ಲಕ್ಷ ವೆಚ್ಚದ ಕಾರ್ಯಗಳನ್ನು ಇನ್ನೂ ಕೈಗೆತ್ತಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರಥಮವಾಗಿ ಎಲ್ಲಾರೂ 108 ಲಕ್ಷ ವೆಚ್ಚದ ಕಾಮಗಾರಿಗಳ ಹೊಣೆಯನ್ನು ಭೂಸೇನಾ ನಿಗಮಕ್ಕೆ ನೀಡಲಾಗಿತ್ತು. ನಂತರ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಹೊಣೆಯನ್ನು ಜಿಲ್ಲಾ ಪಂಚಾಯ್ತಿಗೆ ನೀಡಲಾಯಿತು. ಮತ್ತೆ ಹೊಣೆಯನ್ನು ಈಗ ಭೂಸೇನಾ ನಿಗಮಕ್ಕೆ ವಹಿಸಿರುವುದು ವಿಳಂಬಕ್ಕೆ ಒತ್ತು ನೀಡಿದೆ ಎಂದು ಉಮೇಶ್ ಹೇಳುತ್ತಾರೆ.

ಆದರೆ, ಕೆಲಸ ಮಾಡಿಸಲು ಪೈಪೋಟಿ ಏರ್ಪಟ್ಟಿದ್ದು ಅದಕ್ಕೆ ಪರೋಕ್ಷ ಕಾರಣ ಎಂಬ ಆರೋಪಗಳು ವ್ಯಾಪಕವಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯ್ತಿಕೆಡಿಪಿ ಸಭೆಯಲ್ಲಿಯೂ ಅನೇಕ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
`ಏಜೆನ್ಸಿ' ಬದಲಾದ ಸಮಯದಲ್ಲಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಬೇಕಾದ ಮೂಲ ಕಾಮಗಾರಿಗಳ ಪೈಕಿ ಕೆಲವುಗಳನ್ನು ಉದ್ಯೋಗ ಖಾತ್ರಿ, ಬಿಆರ್‌ಜಿಎಫ್ ಯೋಜನೆಗಳಲ್ಲಿ ಮಾಡಲಾಗಿದೆ.

ಈಗ ನೂತನ ಕಾಮಗಾರಿಗಳನ್ನು ಗುರುತಿಸಿ ಕ್ರಿಯಾಯೋಜನೆ ಸಲ್ಲಿಸುವಂತೆ ಗ್ರಾಮ ಪಂಚಾಯ್ತಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೂ ಪತ್ರ ಬರೆಯಲಾಗಿದ್ದು, ಯಾವುದೇ ಉತ್ತರ ಬಂದಿಲ್ಲ. ಕ್ರಿಯಾಯೋಜನೆ ನೀಡಿದಲ್ಲಿ ತಕ್ಷಣವೇ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಎಂಜಿನಿಯರ್ ಉಮೇಶ್ ಹೇಳುತ್ತಾರೆ.

ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಕೊಳ್ಳುವ ಮೂಲಕ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು. ಅದಕ್ಕೂ ಮೊದಲು ಗ್ರಾಮ ಪಂಚಾಯ್ತಿ ಹಾಗೂ ಭೂಸೇನಾ ನಿಗಮದ ಅಧಿಕಾರಿಗಳು ಸಮನ್ವಯ ತೋರಬೇಕಿದೆ ಎಂದು ಮನವಿ ಮಾಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.