ADVERTISEMENT

‘ನಾನ್ ಬಂದ್ ಮೇಲೆ ನಂದೇ ಹವಾ’

​ಪ್ರಜಾವಾಣಿ ವಾರ್ತೆ
Published 5 ಮೇ 2018, 10:52 IST
Last Updated 5 ಮೇ 2018, 10:52 IST

ನಾಯಕನಹಟ್ಟಿ: ನೆಚ್ಚಿನ ನಟ ಯಶ್‌ ಅವರನ್ನು ಕಣ್ತುಂಬಿಕೊಳ್ಳಲು ನೂರಾರು ಅಭಿಮಾನಿಗಳು, ಯುವಕರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದ ಬಳಿ ಶುಕ್ರವಾರ ಕಾಯುತ್ತಿದ್ದರು.  ಕೆಲ ಅಭಿಮಾನಿಗಳು ಯಶ್ ಸಿನಿಮಾದ ಡೈಲಾಗ್‌ಗಳನ್ನು ಹೇಳುತ್ತ, ಅವರ ಹಾಡುಗಳಿಗೆ ನೃತ್ಯ ಮಾಡಿದರು.

ನಿಗದಿಯಾದ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಯಶ್‌ ಬಂದರೂ ಅಭಿಮಾನಿಗಳ ಉತ್ಸಾಹ ಕುಂದಲಿಲ್ಲ. ಅವರು ಬರುತ್ತಿದ್ದಂತೆ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೂವಿನ ಹಾರಗಳನ್ನು ಹಾಕಿದರು. ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಮನೆಗಳ ಮೇಲೆ ನಿಂತ ಯುವತಿಯರು ತಾವೇನೂ ಕಡಿಮೆ ಇಲ್ಲ ಎಂಬಂತೆ ಮೊಬೈಲ್‌ಗಳಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು.ರೋಡ್‌ ಷೋ ಉದ್ದಕ್ಕೂ ರಾಕಿಂಗ್ ಸ್ಟಾರ್ ಎದುರು ಅಭಿಮಾನಿಗಳು ನೃತ್ಯ ಮಾಡಿದರು.

ಸಭೆಯಲ್ಲಿ ಮಾತನಾಡಿದ ಯಶ್‌, ‘ನಿಮ್ಮ ಅಭಿಮಾನಕ್ಕೆ ಮನಸೋತಿದ್ದೇನೆ. ಮೊಳಕಾಲ್ಮುರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚಿಸಲು ಬಂದಿದ್ದೇನೆ. ಅವರು ಗೆದ್ದ ನಂತರ ನಾನೇ ಅಭ್ಯರ್ಥಿಯಾಗಿ ನಿಂತು ಇಲ್ಲಿನ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತೇನೆ. ಒಂದು ವೇಳೆ ಅವರು ನಮ್ಮ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸದೇ ಇದ್ದರೆ, ಅವರ ವಿರುದ್ಧ ನಿಂತು ಪ್ರಚಾರ ಮಾಡುವ ಕೆಲಸ ಮಾಡುತ್ತೇನೆ ಎಂದು ಶ್ರೀರಾಮುಲುಗೆ ಷರತ್ತು ಹಾಕಿದ್ದೇನೆ’ ಎಂದು ಹೇಳಿದರು.

ADVERTISEMENT

ಅಭಿಮಾನಿಗಳು ಡೈಲಾಗ್ ಹೊಡೆಯಲು ಪದೇ ಪದೇ ಕೂಗಿದರು. ‘ರಾಮಾಚಾರಿ’ ಚಿತ್ರದ ‘‘ಅಣ್ತಮ್ಮ ನಾನ್ ಬರೋವರ್ಗು ಮಾತ್ರ ಬೇರೆಯವ್ರ ಹವಾ... ನಾನ್‌ ಬಂದ್ ಮೇಲೆ ನಂದೇ ಹವಾ’’ ಎಂದು ಡೈಲಾಗ್‌ ಹೊಡೆದಾಗ, ಕೇಕೆ, ಶಿಳ್ಳೆಗಳು ಮುಗಿಲು ಮುಟ್ಟಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.