ADVERTISEMENT

ನೋಟು ರದ್ದತಿ: ತಿಂಗಳಾದರೂ ತೀರದ ಬವಣೆ

ದೈನಂದಿನ ಖರ್ಚಿಗೆ ಹಣ ಸಿಗದೆ ನಾಗರಿಕರ ಪರದಾಟ: ಬ್ಯಾಂಕ್‌ ಮುಂದೆ ದಿನವಿಡೀ ಉದ್ದ ಸಾಲು

ರಾಜಾ ಪರಶುರಾಮ ನಾಯಕ
Published 9 ಡಿಸೆಂಬರ್ 2016, 6:30 IST
Last Updated 9 ಡಿಸೆಂಬರ್ 2016, 6:30 IST

ಚಳ್ಳಕೆರೆ: ನೋಟು ರದ್ದು ಮಾಡಿದ ನಂತರ ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ಮಿತಿ ಹೇರಿರುವ ಕಾರಣ ಗ್ರಾಮೀಣ ಬ್ಯಾಂಕ್‌ಗಳ ಎದುರು ಸಾರ್ವಜನಿಕರು ನಿತ್ಯ ಹಣಕ್ಕಾಗಿ ಸರದಿಯಲ್ಲಿ ನಿಂತು ಕಾಲ ಕಳೆಯುವಂತಾಗಿದೆ.

ತಾಲ್ಲೂಕಿನ ಬೆಳಗೆರೆ, ಸಾಣಿಕೆರೆ, ದೇವರಮರಿಕುಂಟೆ ಟಿ.ಎನ್‌.ಕೋಟೆ ಮತ್ತು ಗೋಪನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ನಿತ್ಯ ಗ್ರಾಮೀಣ ಭಾಗದ ಜನರು ಬ್ಯಾಂಕ್‌ಗಳಲ್ಲಿ ಹಣ ಪಡೆಯುವುದೇ ಒಂದು ಕೆಲಸವಾಗಿದೆ.

₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು  ರದ್ದು ಮಾಡಿರುವುದಾಗಿ ನ.8ರಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿ
ದ್ದರು. ಇದಾಗಿ ಒಂದು ತಿಂಗಳು ಕಳೆದರೂ ಸಾರ್ವಜನಿಕರು ಬ್ಯಾಂಕ್‌ಗಳ ಎದುರು ಸರದಿಯಲ್ಲಿ ನಿಲ್ಲುವುದು ಕಡಿಮೆಯಾಗಿಲ್ಲ.

ADVERTISEMENT

ಬೆಳಿಗ್ಗೆನಿಂದಲೇ ಸರದಿ:  ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಮಹಿಳೆಯರು, ವೃದ್ಧರು ಮತ್ತು ಅಂಗವಿಕಲರು ಸರದಿ ಸಾಲಿನಲ್ಲಿ ಬೆಳಿಗ್ಗೆ ಆರು ಗಂಟೆಯಿಂದಲೇ ನಿಲ್ಲುತ್ತಿದ್ದಾರೆ. ಗ್ರಾಮೀಣ ಬ್ಯಾಂಕ್‌ಗಳಲ್ಲಿ ದಿನವೊಂದಕ್ಕೆ ಒಬ್ಬರಿಗೆ ಕೇವಲ ₹ 2,500 ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಹಣದ ಅಗತ್ಯವಿರುವ ಗ್ರಾಮಸ್ಥರು ನಿತ್ಯ ಬ್ಯಾಂಕ್‌ ಎದುರು ನಿಲ್ಲುವ ಪರಿಸ್ಥಿತಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಕಲಮರಹಳ್ಳಿ ಗ್ರಾಮದ ರಂಗಸ್ವಾಮಿ.

ಮಾರುದ್ದ ಸರದಿ: ‘ಬ್ಯಾಂಕ್‌ಗಳ ಎದುರು ಬಿಸಿಲಿನಲ್ಲಿ ಸಾಲುಗಟ್ಟಿ ನಿಲ್ಲುವಂಥ ಪರಿಸ್ಥಿತಿ ಇದ್ದು, ಕೆಲವರು ತಲೆಸುತ್ತು ಬಂದು ಕುಸಿದು ಬಿದ್ದಿರುವ ನಿದರ್ಶನಗಳೂ ಇವೆ.  ಕೆಲವು ಮಹಿಳೆಯರು ತಮ್ಮ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಸರದಿಯಲ್ಲಿ ನಿಂತಿರುವ ದೃಶ್ಯಗಳು ಸಹ ಸಾಮಾನ್ಯವಾಗಿವೆ.  ಆದ್ದರಿಂದ  ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಬೆಳಗೆರೆ ಗ್ರಾಮದ ದೇವೀರಮ್ಮ.

ಅರ್ಧಕ್ಕೆ ನಿಂತ ಕಾಮಗಾರಿ: ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ವಸತಿ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಹಣವನ್ನು ಬ್ಯಾಂಕ್‌ ಗಳಿಂದ ಪಡೆಯಲಾಗದೆ ಕಟ್ಟಡ ನಿರ್ಮಾಣ ಕಾರ್ಯ ನಿಂತು ಹೋಗಿದೆ.  ಮನೆ ನಿರ್ಮಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಬಂದಿದೆ. ಆಶ್ರಯ ಯೋಜನೆ ಮನೆಗಳನ್ನು ಕಟ್ಟಿಸುವ ಸಲುವಾಗಿ ಹಿಂದೆ ಇದ್ದ ಗುಡಿಸಲುಗಳನ್ನು ಸಹ ಕಿತ್ತು ಹಾಕಲಾಗಿದ್ದು, ಈಗ ಹೆಚ್ಚಿನ ಹಣ ತೆತ್ತು ಬಾಡಿಗೆ ಮನೆಗಳಲ್ಲಿ ವಾಸ ಮಾಡುವಂತಾಗಿದೆ ಎಂದು ಅಳಲು
ತೋಡಿಕೊಳ್ಳುತ್ತಾರೆ ಬೆಳಗೆರೆ ಗ್ರಾಮದ ದಂಡಜ್ಜರ ಸುನಂದಮ್ಮ.
 

* ಗ್ರಾಮೀಣ ಬ್ಯಾಂಕ್‌ಗಳಲ್ಲಿ ಹಣದ ಕೊರತೆ ಇರುವುದರಿಂದ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ ಸಿಬ್ಬಂದಿ ಶ್ರಮವಹಿಸಿದ್ದಾರೆ.

-ರವಿಕುಮಾರ್‌
ವ್ಯವಸ್ಥಾಪಕ, ಬೆಳಗೆರೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌

* ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಹಣದ ಅಗತ್ಯವಿದೆ. ಆದರೆ, ಬ್ಯಾಂಕ್‌ನ ನಿಯಮಗಳಿಂದ ಹೆಚ್ಚಿನ ಹಣ ಪಡೆಯಲಾಗದೆ ಸಮಸ್ಯೆ ಉಂಟಾಗಿದೆ.

-ಸಿ.ರಂಗಪ್ಪ
ಅಂಗವಿಕಲ, ಬೆಳಗೆರೆ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.