ADVERTISEMENT

ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಮಹಾಲಿಂಗಪ್ಪ.ಪ್ರಾಮಾಣಿಕವಾಗಿ ದುಡಿಯಿರಿ.

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 7:10 IST
Last Updated 16 ಮಾರ್ಚ್ 2011, 7:10 IST

ಚಿತ್ರದುರ್ಗ: ಸರ್ಕಾರಿ ನೌಕರರು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳಬಾರದು ಎಂದು ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ಕಿವಿಮಾತು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಮಂಗಳವಾರ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಭಿಮಾನದಿಂದ ಮತ್ತು ಸ್ವಯಂ ಗೌರವವಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು. ದುರಾಸೆಗೆ ಬಲಿಯಾಗುವ ಬದಲು ಪ್ರಾಮಾಣಿಕವಾಗಿ ಕೆಲಸ ಮಾಡಿ ಗೌರವದಿಂದ ಬದುಕಿ ಎಂದು ಕಿವಿ ಮಾತು ಹೇಳಿದರು.ಸರ್ಕಾರಿ ನೌಕರರಿಗೆ ನಗರಸಭೆಯಿಂದ ನಿವೇಶನ ನೀಡುವುದು ಸೂಕ್ತ. ಅಲ್ಲಿ ಒಂದೇ ಜಾತಿಗೆ ಸೀಮಿತವಾದ ನೌಕರರಿಲ್ಲ. ಎಲ್ಲ ಜನಾಂಗದವರಿರುತ್ತಾರೆ. ಇದರಿಂದ ಎಲ್ಲ ನೌಕರರಿಗೂ ಅನುಕೂಲವಾಗುತ್ತದೆ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಜಗದೀಶ್ ಮಾತನಾಡಿ, ಯಾವ ಕಾರಣಕ್ಕೂ ನೌಕರರು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳಬಾರದು. ಭ್ರಷ್ಟಾಚಾರದಲ್ಲಿ ಪಾಲ್ಗೊಂಡರೆ ಸಮಾಜದಲ್ಲಿ ನಿಮಗೂ ಕೆಟ್ಟ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದರು.ಕೇಂದ್ರ ಸರ್ಕಾರದ 6ನೇ ವೇತನ ಆಯೋಗ ಮತ್ತು ರಾಜ್ಯದ 5ನೇ ವೇತನ ಆಯೋಗದಿಂದ ಆಗಿರುವ ತಾರತಮ್ಯ ವೇತನ ಸರಿಪಡಿಸಲು ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಜೂನ್ ಒಳಗೆ ವರದಿ ನೀಡಲಿದೆ ಎಂದು ವಿವರಿಸಿದರು.

6ನೇ ವೇತನ ಆಯೋಗವನ್ನು ಜಾರಿಗೊಳಿಸುವಂತೆ ನೌಕರರು ಒತ್ತಾಯ ಮಾಡಬಾರದು. ಸರ್ಕಾರ ಮತ್ತು ಸಂಘದ ನಡುವೆ ಆಗಿರುವ ಒಪ್ಪಂದದ ಪ್ರಕಾರ 5 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಯಾಗಬೇಕು. 5ನೇ ವೇತನ ಆಯೋಗ 2007ರಲ್ಲಿ ಜಾರಿಯಾಗಿದ್ದರಿಂದ 6ನೇ ವೇತನ ಆಯೋಗ 2012 ಜಾರಿಯಾಗಬೇಕು. ಆದರೆ, ಈ ಬಗ್ಗೆ ಹಲವಾರು ನೌಕರರಿಗೆ ಸಮರ್ಪಕ ಮಾಹಿತಿ ಇಲ್ಲದೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿರುವುದು ತಪ್ಪು. ಹಾಗೆ ನೋಡಿದರೆ ಸಮಿತಿ ರಚಿಸಿರುವುದು ನೌಕರರ ಗೆಲುವು ಎಂದು ಪ್ರತಿಪಾದಿಸಿದರು.

ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಮಾತನಾಡಿ, ನಗರಸಭೆಗಿರುವ ನಾಲ್ಕು ಎಕರೆ ಜಮೀನು ನೀಡುವಂತೆ ಹಲವು ಸಂಘ-ಸಂಸ್ಥೆಗಳು ಕೇಳುತ್ತಿವೆ. ಯಾರಿಗೆ ನೀಡಬೇಕು ಎನ್ನುವುದು ಕಷ್ಟವಾಗಿದೆ. ಆದ್ದರಿಂದ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ವೇದಿಕೆಯೊಂದನ್ನು ನಿರ್ಮಿಸಿ ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ಇದೆ ಎಂದು ನುಡಿದರು. ಜಿ.ಪಂ. ಸದಸ್ಯ ರವಿಕುಮಾರ್, ನಗರಸಭೆ ಉಪಾಧ್ಯಕ್ಷ ಅಲ್ಲಾ ಭಕ್ಷ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಡಿ. ಇಂದಿರಾದೇವಿ, ಮುಹೀಬುಲ್ಲಾ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.