ADVERTISEMENT

ಪಕ್ಷ ತ್ಯಜಿಸುವವರು ಇಂದೇ ತ್ಯಜಿಸಿ

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸೇತೂರಾಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 4:39 IST
Last Updated 12 ಸೆಪ್ಟೆಂಬರ್ 2013, 4:39 IST

ಚಳ್ಳಕೆರೆ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ನೇತೃತ್ವದ ಯಪಿಎ ಸರ್ಕಾರ ಕಳೆದ 10ವರ್ಷಗಳಲ್ಲಿ ಜನಪರವಾದ ಆಡಳಿತ ನೀಡುವ ಮೂಲಕ ಉತ್ತಮ ಸರ್ಕಾರ ಎಂಬ ಖ್ಯಾತಿ ಪಡೆದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಚೆಲ್ಲಕುಮಾರ್‌ ಹೇಳಿದರು.

ಪಟ್ಟಣದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬ್ಲಾಕ್‌ ಕಾಂಗ್ರೆಸ್ ‌ವತಿಯಿಂದ ಆಯೋಜಿಸಿದ್ದ ಲೋಕಸಭಾ ಚುನಾವಣೆ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸುತ್ತಿದ್ದ ಕೋಮುವಾದಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಮೂಲಕ ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಕಾಂಗ್ರೆಸ್‌ ಸರ್ಕಾರಕ್ಕೆ ಬಹುಮತ ನೀಡುವ ಮೂಲಕ ಉತ್ತಮ ತೀರ್ಮಾನ ಕೈಗೊಂಡ ಜನತೆಗೆ ಅಭಿನಂದನೆ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಎ.ಸೇತೂರಾಂ ಮಾತನಾಡಿ, ಈಗಾಗಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಹಳಷ್ಟು ಆಕಾಂಕ್ಷಿಗಳು ಮುಂದೆ ಬರುತ್ತಿದ್ದಾರೆ. ಎಐಸಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕೆ ಇಳಿಸುತ್ತದೆ.

ಟಿಕೆಟ್‌ ಸಿಗದ ಆಕಾಂಕ್ಷಿಗಳು  ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ದ್ರೋಹ ಬಗೆದು ಪಕ್ಷ ತ್ಯಜಿಸುವುದಕ್ಕಿಂತ ಅಪನಂಬಿಕೆ ಇರುವವರು ಇಂದೇ ಪಕ್ಷ ತ್ಯಜಿಸಿ ಎಂದು ಸೂಚಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತದಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್‌ ಸೂಚಿಸಿದ ವ್ಯಕ್ತಿಗೆ ಅತ್ಯಂತ ಹೆಚ್ಚು ಮತಗಳನ್ನು ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣಾ ಟಿಕೆಟ್‌ ಆಕಾಂಕ್ಷಿ ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಸಿ.ಬಾಬು. ರಾಮಪ್ಪ, ಪ್ರಕಾಶಮೂರ್ತಿ, ಜಲಜಾನಾಯ್ಕ, ಬಿ.ಟಿ.ಜಗದೀಶ್‌ ಮತ್ತಿತರರು ಇದ್ದರು.

ಆಕಾಂಕ್ಷಿಗಳ ಆಡಂಬರ: ಫ್ಲೆಕ್ಸ್‌, ಬ್ಯಾನರ್‌ಗಳ ಅಬ್ಬರ
ಲೋಕಸಭಾ ಚುನಾವಣೆ ಆಕಾಂಕ್ಷಿಗಳ ಅಬ್ಬರ ಬುಧವಾರ ಪಟ್ಟಣದಾದ್ಯಂತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಕಟ್ಟುವ ಮೂಲಕ ಆಡಂಬರದಿಂದ ಕೂಡಿತ್ತು. ಎಂ.ರಾಮಪ್ಪ, ಡಿ.ಬಸವರಾಜ್‌, ಪ್ರಕಾಶ ಮೂರ್ತಿ ಅವರ ಭಾವಚಿತ್ರ ಇರುವ ಫ್ಲೆಕ್ಸ್‌ಗಳು ನಗರದ ಹಲವೆಡೆ ಅಲ್ಲಲ್ಲಿ ಕಂಡುಬಂದವು. ಸಭೆಯಲ್ಲಿ ಡಾ.ಬಿ.ತಿಪ್ಪೇಸ್ವಾಮಿ ಪರ ನೂರಾರು ಬೆಂಬಲಿಗರು ಜೈಕಾರ ಹಾಕುವ ಜತೆಗೆ ಟಿಕಟ್‌ ಇವರಿಗೇ ನೀಡಬೇಕು ಎಂದು ಒತ್ತಾಯಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿತ್ತು.

ದೇಶದ ಐಕ್ಯತೆಗೆ ಕಾಂಗ್ರೆಸ್ ಆಡಳಿತ ಅಗತ್ಯ
ಹೊಸದುರ್ಗ: ದೇಶದ ಐಕ್ಯತೆಗೆ ಕಾಂಗ್ರೆಸ್ ಆಡಳಿತ ಅಗತ್ಯ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಚೆಲ್ಲಕುಮಾರ್ ತಿಳಿಸಿದರು.
ಲೋಕಸಭಾ ಚುನಾವಣಾ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪೂರ್ವ ಯೋಜನೆ ರೂಪಿಸಲು ಬುಧವಾರ ಪಟ್ಟಣದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಬಹುದೊಡ್ಡ ಇತಿಹಾಸವಿದೆ. ಅಷ್ಟೇ ಅಲ್ಲದೆ ಜಾತ್ಯತೀತ ಆಡಳಿತವನ್ನು ನಡೆಸುವುದರ ಮೂಲಕ, ಎಲ್ಲಾ
ವರ್ಗದ ಜನತೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಜನರ ಮೆಚ್ಚುಗೆ ಪಡೆದಿರುವ ಪಕ್ಷವಾಗಿದೆ ಎಂದರು.
ಸಭೆಯಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಸೇತೂರಾಂ, ಕಾರ್ಯದರ್ಶಿ ಬಿ.ಟಿ.ಜಗದೀಶ್,
ಬ್ಲಾಕ್ ಅಧ್ಯಕ್ಷ ಪ್ರಕಾಶ್ ಪೂಜಾರ್, ಜಲಜಾಕ್ಷಿ, ವಾಮಿಕ್ ಸಾಹೇಬ್, ಜಯಪ್ರಕಾಶ್, ಸಭೀರ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.