ADVERTISEMENT

ಪರಶುರಾಂಪುರದಲ್ಲಿ ಬಿಜೆಪಿ ರೋಡ್ ಷೋ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 9:21 IST
Last Updated 29 ಏಪ್ರಿಲ್ 2018, 9:21 IST

ಪರಶುರಾಂಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಅನೇಕ ಅಕ್ರಮ ದಂಧೆಗಳಲ್ಲಿ ಇಲ್ಲಿನ ಶಾಸಕರ ಪಾಲಿದೆ. ಈ ಬಾರಿ ಅವರನ್ನು ಸೋಲಿಸುವ ಮೂಲಕ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರನ್ನ ಕ್ಷೇತ್ರದ ಶಾಸಕರಾಗಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಸಂಸದ ಶ್ರೀರಾಮುಲು ಹೇಳಿದರು.

ಅವರು ಶನಿವಾರ ಪರಶುರಾಂಪುರದಲ್ಲಿ ಹಮ್ಮಿಕೊಂಡಿದ್ದ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಬಿಜೆಪಿ ಅಭ್ಯರ್ಥಿ ಕುಮಾರಸ್ವಾಮಿ ನನ್ನ ಸಹೋದರ. ಹಾಗಾಗಿ ನೀವು ಅವರಿಗೆ ಆಶೀರ್ವಾದ ಮಾಡಿ ವಿಧಾನ ಸಭೆಗೆ ಕಳುಹಿಸಿಕೊಡಬೇಕು’ ಎಂದರು.

ADVERTISEMENT

ಈ ಭಾಗದಲ್ಲಿ 5 ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲಿಲ್ಲ. ಜೊತೆಗೆ 30 ವರ್ಷಗಳ ಕನಸಾಗಿರುವ ಪರಶುರಾಂಪುರ ತಾಲ್ಲೂಕು ಕೇಂದ್ರವಾಗಲಿಲ್ಲ. ಈ ಭಾಗದ ಶಾಸಕರು ಹಾಗೂ ಸರ್ಕಾರ ಚಳ್ಳಕೆರೆ ತಾಲ್ಲೂಕಿಗೆ ಯಾವುದೇ ರೀತಿಯ ಅಭಿವೃದ್ದಿ ಮಾಡಿಲ್ಲ. ನಾಯಕ ಜನಾಂಗಕ್ಕೆ ಶೇ 3 ಮೀಸಲಾತಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ಶೇ 7ಕ್ಕೆ ಹೆಚ್ಚಿಸಲಾಗುವುದು ಜೊತೆಗೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.

ಚಾಮುಂಡೇಶ್ವರಿಯಲ್ಲಿ ಸೋಲುವ ಭಯದಿಂದ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಲ್ಲಿಯೂ ಅವರ ಸೊಲು ಖಚಿತ ಎಂದು ಶ್ರೀರಾಮುಲು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ‘ಶ್ರೀರಾಮುಲು ಅವರು ನಮ್ಮ ಪಕ್ಕದ ತಾಲ್ಲೂಕು ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳಿಗೂ ಆನೆ ಬಲ ಬಂದತಾಗಿದೆ’ ಎಂದರು.

ಈ ಸಂದರ್ಭದಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷ ಸಿರಿಯಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಪುತ್ರಪ್ಪ, ಬಿಜೆಪಿ ಮುಖಂಡರಾದ ಇ.ಎನ್. ವೆಂಕಟೇಶ್, ಬಿ.ತಿಪ್ಪೇಸ್ವಾಮಿ, ಪ್ರಸನ್ನಕುಮಾರ, ಶ್ರೀನಿವಾಸ್, ಗುಜ್ಜಾರಪ್ಪ, ಸಿದ್ದೇಶ್ ಇದ್ದರು.

ಚಿತ್ರದುರ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲ ಸಂಗಮದಲ್ಲಿ ಆಣೆ ಪ್ರಮಾಣ ಮಾಡಿದರೂ ಉತ್ತರ ಕರ್ನಾಟಕದಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿಗೆ ತರಲಿಲ್ಲ, ಮಧ್ಯ ಕರ್ನಾಟಕಕ್ಕೆ ಭದ್ರಾ ನೀರು ಹರಿಸಲಿಲ್ಲ’ ಎಂದು ಸಂಸದ ಬಿ.ಶ್ರೀರಾಮುಲು ಆರೋಪಿಸಿದರು.

ತುರುವನೂರು ಪ್ರಚಾರಕ್ಕೆ ತೆರಳುವ ಮುನ್ನ ಶನಿವಾರ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಹೆಲಿಪ್ಯಾಡ್‌ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೋದಿ ರಾಜ್ಯ ಸರ್ಕಾರವನ್ನು ಹತ್ತು ಪರ್ಸೆಂಟ್ ಸರ್ಕಾರ ಅಂದಿದ್ದರು. ನಾನು ಪ್ರಚಾರಕ್ಕೆ ಹೋದಲ್ಲೆಲ್ಲ ಜನ ಇಪ್ಪತ್ತು ಪರ್ಸೆಂಟ್ ಸರ್ಕಾರ ಅಂತ ಮಾತಾಡಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ನಮ್ಮ ಪಕ್ಷದ ಅಧಿಕಾರಕ್ಕೆ ಬಂದ ಕೂಡಲೇ ನೀರಾವರಿಗಾಗಿ ಕೇಂದ್ರದಿಂದ ₹1 ಲಕ್ಷ ಕೋಟಿ ಹಣ ತಂದು ಸಮಗ್ರ ನೀರಾವರಿ ಯೋಜನೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ಬಿಜೆಪಿ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ, ನಗರಸಭೆ ಸದಸ್ಯೆ ಶ್ಯಾಮಲ ಶಿವಪ್ರಕಾಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ವಕ್ತಾರ ನಾಗರಾಜ್‌ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.