ಚಿತ್ರದುರ್ಗ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಗುರುವಾರ ಆರಂಭವಾಗಿವೆ.ಗುರುವಾರ ಲೆಕ್ಕಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆಗೆ 4622 ವಿದ್ಯಾರ್ಥಿಗಳು ಹಾಜರಾಗಿದ್ದರು ಮತ್ತು 343 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ರವೀಂದ್ರ ಆರ್. ಕೊಣ್ಣೂರ ತಿಳಿಸಿದ್ದಾರೆ.ಲೆಕ್ಕಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
ಆಸನದ ಅವ್ಯವಸ್ಥೆ
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಸನದ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ವಿದ್ಯಾರ್ಥಿನಿಯರಿಗೆ ಜಾಗ ಕಿಷ್ಕಿಂದೆಯಾಗಿತ್ತು. ಡೆಸ್ಕ್ ಸೌಲಭ್ಯ ಇಲ್ಲದ ಕಾರಣ ಕೆಲವು ವಿದ್ಯಾರ್ಥಿನಿಯರು ನೆಲದ ಮೇಲೆಯೇ ಕುಳಿತು ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಉಂಟಾಯಿತು.ವಿದ್ಯಾರ್ಥಿನಿಯರು ಸಮರ್ಪಕವಾಗಿ ಪರೀಕ್ಷೆ ಬರೆಯಲು ಅನುಕೂಲ ಆಗುವಂತೆ ಮುಂಜಾಗ್ರತಕ್ರಮವಾಗಿ ಆಸನದ ವ್ಯವಸ್ಥೆ ಬಗ್ಗೆ ಕ್ರಮಕೈಗೊಳ್ಳದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.
ಅಧಿಕಾರಿಗಳ ಮತ್ತು ವ್ಯವಸ್ಥಾಪಕರ ನಿರ್ಲಕ್ಷ್ಯದ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಪರೀಕ್ಷೆ ಬರೆಯಲು ಡೆಸ್ಕ್ ಒದಗಿಸದಷ್ಟು ಸೌಲಭ್ಯಗಳಿಲ್ಲವೇ?. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.ದ್ವಿತೀಯ ಪಿ.ಯು. ಪರೀಕ್ಷೆಗಳು ಮಾರ್ಚ್ 30ರವರೆಗೆ ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.
ಕಪ್ಪುಪಟ್ಟಿ ಧರಿಸಿ ಹಾಜರು
ಹೊಸದುರ್ಗ ವರದಿ: ಪಟ್ಟಣದ ಮೂರು ಪರೀಕ್ಷಾ ಕೇಂದ್ರಗಳು ಸೇರಿದಂತೆ ತಾಲ್ಲೂಕಿನ ಆರು ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡವು.ವೇತನ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ಎಡಗೈ ತೋಳಿಗೆ ಕಪ್ಪುಪಟ್ಟಿ ಧರಿಸಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾದರು.
ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು, ಗವಿರಂಗನಾಥ ಸಂಯುಕ್ತ ಪ.ಪೂ. ಕಾಲೇಜು, ಎಸ್‌ಜೆಎಂ ಕಾಲೇಜು ಹಾಗೂ ಬೆಲಗೂರು, ಶ್ರೀರಾಂಪುರ ಮತ್ತು ಹೊಸದುರ್ಗರೋಡ್ ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಪರೀಕ್ಷೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.