ADVERTISEMENT

ಪೌರ ಕಾರ್ಮಿಕರ ಉಚಿತ ವಿಮೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:10 IST
Last Updated 24 ಫೆಬ್ರುವರಿ 2011, 9:10 IST

ಚಿತ್ರದುರ್ಗ:  ಪೌರ ಕಾರ್ಮಿಕರಿಗೆ ನಗರಸಭೆ ವತಿಯಿಂದ ಉಚಿತವಾಗಿ ವಿಮೆ ಮಾಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ತಿಳಿಸಿದರು.2009-10ನೇ ಸಾಲಿನ ಎಸ್‌ಎಫ್‌ಸಿ ಅನುದಾನದ ಶೇ. 22.75 ಯೋಜನೆ ಅಡಿಯಲ್ಲಿ ನಗರಸಭೆಯ ಪೌರ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿನ ಕಸದ ವಿಲೇವಾರಿ ಜವಾಬ್ದಾರಿಯನ್ನು ಪೌರ ಕಾರ್ಮಿಕರು ಹೊಂದಿದ್ದಾರೆ. ಪೌರಕಾರ್ಮಿಕರ ಆರೋಗ್ಯದ ಜವಾಬ್ದಾರಿಯನ್ನು ನಗರಸಭೆ ಹೊರಬೇಕಾಗಿದೆ.ಇವರಿಗಾಗಿಯೇ ಸರ್ಕಾರದ ವತಿಯಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪೌರ ಕಾರ್ಮಿಕರಿಗೆ ಕರೆ ನೀಡಿದರು.
ಉಡುಪಿ ನಗರಸಭೆ ತನ್ನ ಪೌರಕಾರ್ಮಿಕರಿಗೆ ವಿಮೆ ಸೌಲಭ್ಯ ಕಲ್ಪಿಸಿದೆ. ಅದೇ ರೀತಿ ಚಿತ್ರದುರ್ಗ ನಗರಸಭೆ ಪೌರ ಕಾರ್ಮಿಕರಿಗೆ ವಿಮೆಯನ್ನು ನೀಡಲು ಚಿಂತನೆ ನಡೆಸುತ್ತಿದೆ. ಈ ಸಂಬಂಧ ನಗರಸಭೆಯ ತಂಡವೊಂದು ಭೇಟಿ ನೀಡಿ ಯಾವ ಯೋಜನೆಯಡಿ ಅವರಿಗೆ ವಿಮೆ ನೀಡಲಾಗುತ್ತಿದೆ ಎಂದು ತಿಳಿದುಕೊಂಡು ನಂತರ ನಮ್ಮ ಕಾರ್ಮಿಕರಿಗೆ ಈ ಯೋಜನೆಯನ್ನು ಅಳವಡಿಸಲಾಗುವುದು ಎಂದರು.

ಪೌರಾಯುಕ್ತ ವಿಜಯಕುಮಾರ್ ಮಾತನಾಡಿ, ನಗರದಲ್ಲಿನ ಕಲುಷಿತ ವಾತವರಣದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ಹಿನ್ನೆಲೆಯಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಗರಸಭಾ ಸದಸ್ಯರಾದ ಕುಮಾರ್, ಮಂಜುನಾಥ್ ರೆಡ್ಡಿ, ವ್ಯವಸ್ಥಾಪಕ ನಿಸಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.