ADVERTISEMENT

ಪ್ರಕೃತಿ ಮುಂದೆ ವಿಜ್ಞಾನದ ಸಾಧನೆ ಗೌಣ

ನಾಯಕನಹಟ್ಟಿ; ಶಾಸಕರ ಅಭಿನಂದನಾ ಸಮಾರಂಭದಲ್ಲಿ ಉಜ್ಜಯಿನಿ ಶ್ರೀ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 10:17 IST
Last Updated 10 ಜೂನ್ 2013, 10:17 IST

ನಾಯಕನಹಟ್ಟಿ:  ವಿಜ್ಞಾನ ಎಷ್ಟೇ ಪ್ರಗತಿ  ಸಾಧಿಸಿದರೂ ಪ್ರಕೃತಿಯ ಮುಂದೆ ಗೌಣವಾಗುತ್ತದೆ. ವಿಜ್ಞಾನಿಗಳು ಯಾವುದನ್ನೇ ಮರುಸೃಷ್ಟಿ ಮಾಡಬಹುದು. ಭೂಮಿಯನ್ನು ಮರು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟರು.

ಇಲ್ಲಿನ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಿಂದ ಭಾನುವಾರ ಜಿಲ್ಲೆಯ ಸಚಿವ, ಶಾಸಕರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮನುಷ್ಯ ದುರಾಸೆಯಿಂದ ಭೂಮಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾನೆ. ಭೂಮಿಯಿಂದ ಅನೇಕ ಜೀವ ರಾಶಿಗಳು ಬದುಕನ್ನು ಕಂಡುಕೊಂಡಿವೆ. ರೈತನ ಬದುಕು ಈ ಭೂಮಿಯನ್ನು ಅವಲಂಬಿಸಿದೆ. ಇಂದು ಮನುಷ್ಯ ಹಣದ ಬೆನ್ನತ್ತಿ ಹೋಗುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರಲ್ಲದೇ,   ಸಮೀಕ್ಷೆಯಂತೆ ದೇಶದಲ್ಲಿ 2 ಲಕ್ಷದ 15 ಸಾವಿರ ಕೋಟ್ಯಧೀಶರಿದ್ದು, ಅವರಲ್ಲಿ ಶೇ 69 ರಷ್ಟು ಜನ ಈ ದೇಶದ ರಾಜಕಾರಣಿಗಳು.

ಅಂದರೆ ಜನರ ದುಡ್ಡಿನಲ್ಲಿ ಶ್ರೀಮಂತರಾಗುತ್ತಿದ್ದಾರೆ. ಸೇವೆಯನ್ನು ಮರೆತು ಹಣಗಳಿಸುವುದೇ ಈಗಿನ ರಾಜಕೀಯ ಗುರಿಯಾಗಿದೆ. ಇದರ ಬದಲಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಆದರ್ಶವ್ಯಕ್ತಿ ಗಳನ್ನಿಕೊಟ್ಟಳ್ಳಬೇಕು. ರಾಜಕೀಯ ವ್ಯಕ್ತಿಗಳು ಲಾಲ್ ಬಹದ್ದೂರ್ ಶಾಸ್ತ್ರಿಯ ಅವರನ್ನು ಆದರ್ಶ ವಾಗಿಟ್ಟುಕೊಂಡು ಸೇವೆ ಮಾಡಿದರೆ ದೇಶ ಸುಭೀಕ್ಷವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಲೋಕಸಭಾ ಸದಸ್ಯರಾದ ಜನಾರ್ದನಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಬರಪೀಡಿತ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ. ಭದ್ರಾಮೇಲ್ದಂಡೆ, ಹಾಗೂ ಚಿತ್ರದುರ್ಗ-ಬೆಂಗಳೂರು ನೇರ ರೈಲು ಮಾರ್ಗ ಜಾರಿಯಾದರೆ ಈ ಹಣೆಪಟ್ಟಿಯನ್ನು ಕಳಚಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಳಕಾಲ್ಮೂರು ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಮೊಳಕಾಲ್ಮುರು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು, ಭದ್ರಾಮೇಲದಂಡೆ ಯೋಜನೆಯು ಮೊಳಕಾಲ್ಮುರು ಕ್ಷೇತ್ರಕ್ಕೆ ಬರಲು ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತೇನೆ. ಮೊಟ್ಟ ಮೊದಲ ಶಾಸಕರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ರೂ10 ಲಕ್ಷವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಎಂವೈಟಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಶಾಸಕರಾದ ಟಿ.ರಘುಮೂರ್ತಿ, ಡಿ.ಸುಧಾಕರ್, ಸಂಸದ ಜನಾರ್ದನ ಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಯಮ್ಮ ಬಾಲರಾಜ್, ಲಕ್ಷ್ಮೀದೇವಿದೊಡ್ಡಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಬೋರಮ್ಮ ಬಂಗಾರಪ್ಪ, ಓಂ ವೃಕ್ಷವೃದ್ಧಿ ಆಶ್ರಮದ ತಿಪ್ಪೇರುದ್ರ ಸ್ವಾಮೀಜಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಏಕಾಂತಮ್ಮ, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಹಾಲಪ್ಪ, ಸಮಿತಿಯ ಅಧ್ಯಕ್ಷರಾದ ಎಂವೈಟಿ ಸ್ವಾಮಿ ಮತ್ತು ಸದಸ್ಯರುಗಳು, ಸ್ಥಳೀಯ ಜನಪ್ರತಿನಿಧಿಗಳು  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT