ADVERTISEMENT

`ಬಯಲುಸೀಮೆಗೆ ನೀರು ಕೊಡಿ, ಇಲ್ಲವೇ ಆಂಧ್ರಕ್ಕೆ ಸೇರಲು ಅವಕಾಶ ಕೊಡಿ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:41 IST
Last Updated 6 ಸೆಪ್ಟೆಂಬರ್ 2013, 5:41 IST

ಹಿರಿಯೂರು: `ಆಂಧ್ರದ ಗಡಿಗೆ ಹೊಂದಿಕೊಂಡಿರುವ ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಬೇಕು ಇಲ್ಲವಾದಲ್ಲಿ ಈ ಮೂರೂ ಜಿಲ್ಲೆಗಳನ್ನು ಸೀಮಾಂಧ್ರಕ್ಕೆ ಸೇರಿಸಲು ಒಪ್ಪಿಗೆ ಕೊಡಬೇಕು' ಎಂದು ತಾಲ್ಲೂಕಿನ ಕಸವನಹಳ್ಳಿಯ ರೈತ ಮುಖಂಡರಾದ ರಮೇಶ್ ಹಾಗೂ ಎಸ್.ವಿ.ರಂಗನಾಥ್ ಒತ್ತಾಯಿಸಿದ್ದಾರೆ.

ಚುನಾವಣೆ ಬಂದಾಗ ನೀರಾವರಿ ಯೋಜನೆಗಳ ಬಗ್ಗೆ ಬಾಯ್ತುಂಬ ಆಶ್ವಾಸನೆ ನೀಡುವ ರಾಜಕಾರಣಿಗಳು ನಂತರ ಈ ವಿಷಯ ತಮಗೆ ಸಂಬಂಧಿಸಿಯೇ ಇಲ್ಲವೆನ್ನುವಂತೆ ವರ್ತಿಸುತ್ತಾರೆ. 50-60 ವರ್ಷದಿಂದ ಜಿಲ್ಲೆಯ ಏಕಮಾತ್ರ ನೀರಿನ ಆಸರೆಯಾಗಿರುವ ವಾಣಿ ವಿಲಾಸ ಜಲಾಶಯಕ್ಕೆ ಯಾವುದಾದರೂ ಮೂಲದಿಂದ ನೀರು ಹರಿಸುವಂತೆ ಹಲವು ರೀತಿಯ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ವೇದಾವತಿ ನದಿಯ ಉಪನದಿ ಯಗಚಿಯನ್ನು ಹೇಮಾವತಿಗೆ ಕೊಂಡೊಯ್ದು ಈ ಭಾಗದ ಜನರನ್ನು ವಂಚಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.

ಜಲಾಶಯ ದಿನದಿಂದ ದಿನಕ್ಕೆ ಬರಿದಾಗುತ್ತಿದ್ದರೂ ಐಐಎಸ್‌ಸಿ, ಡಿಆರ್‌ಡಿಒ, ಇಸ್ರೋ ಮತ್ತಿತರೆ ಯೋಜನೆಗಳನ್ನು ಆರಂಭಿಸಲು ಅನುಮತಿ ನೀಡಿ, ಜಲಾಶಯದಿಂದ ನೀರು ಪೂರೈಕೆ ಮಾಡಲು ಒಪ್ಪಲಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿಯನ್ನು ಜನರ ವಿರೋಧದ ನಡುವೆಯೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಜನರಿಗೆ ಇರುವ ನೀರಾವರಿ ಸೌಲಭ್ಯ ಬಯಲು ಸೀಮೆಯ ಜನರಿಗೆ ಸಿಗುತ್ತಿಲ್ಲ. ಹೊಸ ರಾಜ್ಯದಲ್ಲಾದರೂ ನಮ್ಮ ನೀರಾವರಿ ಕನಸು ನನಸಾಗಬಹುದು ಎಂದು ರಮೇಶ್ ಮತ್ತು ರಂಗನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.